ಬೆಳಗಾವಿ: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ನೂತನ ಶಾಸಕರು ಮತ್ತು ಸಚಿವರಿಗೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ವತಿಯಿಂದ ಜುಲೈ 5ರಂದು ಸಂಜೆ 5:30ಕ್ಕೆ ಬೆಂಗಳೂರಿನ ಚಾಮರಾಜನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವೇದಿಕೆಯ ಕಿತ್ತೂರು ಕರ್ನಾಟಕ ಪ್ರದೇಶ ಅಧ್ಯಕ್ಷ ಉಮೇಶ್ ಬಾಳಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಭಗವತ್ಪಾದರು ಸಾನ್ನಿಧ್ಯದಲ್ಲಿ ಈ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಪಕ್ಷದ 39 ಶಾಸಕರು, ಬಿಜೆಪಿಯ 18 ಮತ್ತು ಜೆಡಿಎಸ್‌ನ 2 ಶಾಸಕರು ವಿಧಾನಸಭೆಗೆ ಆಯ್ಕೆಯಾಗಿದ್ದು ಈ ಎಲ್ಲರನ್ನೂ ಪಕ್ಷಾತೀತವಾಗಿ ವೇದಿಕೆಯ ಪರವಾಗಿ ಸತ್ಕರಿಸಲಾಗುತ್ತಿದೆ ಎಂದರು.
ಸಮಾರಂಭದಲ್ಲಿ ರಾಜ್ಯದ ವಿವಿಧ ಮಠಗಳ ಸ್ವಾಮೀಜಿಗಳು, ಉದ್ಯಮಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದವರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವೇದಿಕೆಯು ಉಪಜಾತಿ, ಒಳಪಂಗಡ ಎನ್ನದೇ ವೀರಶೈವ ಲಿಂಗಾಯತ ಸಮಾಜದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದೆ. 2ಎ ಮೀಸಲಾತಿಗಾಗಿ ಹೋರಾಟ ನಡೆಸಿದೆ. ಇನ್ನು ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಸಂಘಟನೆ ತೊಡಗಿಕೊಂಡಿದೆ ಎಂದರು.
ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯ ವೈದ್ಯರ ಘಟಕದ ಅಧ್ಯಕ್ಷ ಡಾ. ಸುಭಾಷ್ ಪಾಟೀಲ, ಇತರ ಪದಾಧಿಕಾರಿಗಳಾದ ಡಾ. ಉಮೇಶ್ ವಾಲಿ, ಡಾ. ಶಿವಾನಂದ ಕುಸ್ಲಾಪುರ, ನಿಖಿಲ್ ಅಂಗಡಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಶೀತಲ ಮಠಪತಿ ಸುದ್ದಿಗೋಷ್ಠಿಯಲ್ಲಿದ್ದರು.