ಜಿಲ್ಲೆ

28 ವರ್ಷದ ನಂತರ ತಾಯ್ನಾಡಿಗೆ ವಾಪಸ್ಸಾದ ‌‌‌ವೀರ ಸೈನಿಕನಿಗೆ ಮಂಡ್ಯದಲ್ಲಿ ಸ್ಮರಣೀಯ ಸ್ವಾಗತ: ಜೀವಧಾರೆ ಟ್ರಸ್ಟ್‌ನಿಂದ ಪಾದಪೂಜೆ, ಸನ್ಮಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಬರೋಬರಿ 28 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕರ್ತವ್ಯ ಮುಗಿಸಿ ತಾಯ್ನಡಿಗೆ ವಾಪಸಾದ ಕೆ.ಆರ್.ನಗರದ ಸುಬೇದಾರ್ ಜಗತಾಪ್‌ಎನ್‌ಆರ್ ಅವರಿಗೆ ಗುರುವಾರ ನಗರದಲ್ಲಿ ಜೀವಧಾರೆ ಟ್ರಸ್ಟ್‌ನಿಂದ ಸ್ಮರಣೀಯ ಸ್ವಾಗತ ನೀಡಲಾಯಿತು.
1996ರಲ್ಲಿ ಮಂಡ್ಯದಿಂದ ಸೇನೆಯ ಜರ್ನಿ ಆರಂಭಿಸಿದ ಸುಬೇದಾರ್ ಜಗತಾಪ್‌ಎನ್‌ಆರ್ ಅವರು, ವಿವಿಧ ರಾಜ್ಯದಲ್ಲಿ ಹಾಗೂ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸೇನೆಯಿಂದ ಹಿಂತಿರುಗಿದರು. ಈ ಹಿನ್ನೆಲೆಯಲ್ಲಿ ಜೀವಧಾರೆ ಟ್ರಸ್ಟ್ ಹಾಗೂ ದೇಶಾಭಿಮಾನಿಗಳಿಂದ ನಿರೀಕ್ಷೆಗೂ ಮೀರಿದ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ವೇಳೆ ಜಗತಾಪ್‌ಎನ್‌ಆರ್ ಅವರು ಕೂಡ ಭಾವುಕರಾದರು.
ಮೈಸೂರಿಗೆ ರೈಲಿನಲ್ಲಿ ತೆರಳುತ್ತಿದ್ದ ಜಗತಾಪ್‌ಎನ್‌ಆರ್ ಹಾಗೂ ಕುಟುಂಬದವರನ್ನು ಮಂಡ್ಯ ನಗರದ ರೈಲ್ವೆ ನಿಲ್ದಾಣದಲ್ಲಿ ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಪುಷ್ಪಾರ್ಚನೆ ಸಲ್ಲಿಸಿ ಜಯಘೋಷ ಮೊಳಗಿಸಲಾಯಿತು. ನಂತರ ನೂರಾರೂ ಯುವಕರು ಬೈಕ್ ರ‌್ಯಾಲಿ ಮೂಲಕ ನಗರದ ಪ್ರಮುಖ ಬೀದಿಗಳನ್ನು ಸಾಗಿ ವಿದ್ಯಾನಗರದ ರಾಘವೇಂದ್ರಸ್ವಾಮಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಟ್ರಸ್ಟ್‌ನ ಅಧ್ಯಕ್ಷ ನಟರಾಜು, ಜಗತಾಪ್‌ಎನ್‌ಆರ್ ಅವರ ಪಾದತೊಳೆದರು. ತರುವಾಯ ದೇವಸ್ಥಾನದಲ್ಲಿ ವೀರ ಸೈನಿಕನ ಹೆಸರಿನಲ್ಲಿ ಅಭಿಷೇಕ ಮಾಡಿಸಿ ವಿಶೇಷ ಪೂಜೆ ಸಲ್ಲಿಸಿ ಕುಟುಂಬ ಚೆನ್ನಾಗಿರಲೆಂದು ಪ್ರಾರ್ಥಿಸಲಾಯಿತು.
ಟ್ರಸ್ಟ್‌ನಿಂದ ಸಿಕ್ಕ ಸ್ವಾಗತದ ಬಗ್ಗೆ ಅಭಿಮಾನದಿಂದ ಮಾತನಾಡಿದ ಜಗತಾಪ್‌ಎನ್‌ಆರ್ ಅವರು, ಇಂತಹ ಗೌರವ ಹಾಗೂ ಸ್ವಾಗತವನ್ನು ನಿರೀಕ್ಷೆ ಮಾಡಲಿರಲಿಲ್ಲ. ಇದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. 1996 ಭಾರತೀಯ ಸೇನೆಗೆ ಸೇರ್ಪಡೆಯಾಗಿ ಮಂಡ್ಯದಿಂದ ಜರ್ನಿ ಆರಂಭಿಸಿದೆ. ಹೈದರಾಬಾದ್‌ನಲ್ಲಿ ಒಂದು ವರ್ಷ ತರಬೇತಿ, ಅರುಣಾಚಲ ಪ್ರದೇಶ, ತಮಿಳುನಾಡು ಕೊಯಮತ್ತೂರಿನಲ್ಲಿ ತಲಾ ಎರಡು ಸೇರಿದಂತೆ 28 ವರ್ಷದ ವಿವಿಧ ರಾಜ್ಯ ಹಾಗೂ ಹುದ್ದೆಯಲ್ಲಿ ಕೆಲಸ ಮಾಡಿದ್ದೇನೆ ಎಂದು ವಿವರಿಸಿದರು.
ಎಲ್ಲರ ಆರ್ಶೀವಾದರಿಂದ ಚೆನ್ನಾಗಿದ್ದೇನೆ. ಇದಕ್ಕೆ ಕುಟುಂಬದ ಸಹಕಾರವೂ ಅತಿ ಮುಖ್ಯ. ಅವರೆಲ್ಲರೂ ಕೊಟ್ಟ ಆತ್ಮಸ್ಥೈರ್ಯವನ್ನು ಮರೆಯಲಾಗುವುದಿಲ್ಲ. ಆದ್ದರಿಂದ ಅವರಿಗೆ ಧನ್ಯವಾದ ಹೇಳುತ್ತೇನೆ. ಇನ್ನು ಸೈನಿಕರಿಗೆ ಜೀವಧಾರೆ ಟ್ರಸ್ಟ್‌ನಿಂದ ನೀಡುವ ಗೌರವ ಶ್ಲಾಘನೀಯ. ನಾನು ಕೂಡ ಟ್ರಸ್ಟ್‌ನಲ್ಲಿ ಸದಸ್ಯನಾಗುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿವೃತ್ತ ಸೈನಿಕರಾದ ರವಿ, ಮಹದೇವು, ಉದಯ್‌ಕುಮಾರ್, ಜೀವಧಾರೆ ಟ್ರಸ್ಟ್ ಅಧ್ಯಕ್ಷ ನಟರಾಜು, ಸದಸ್ಯರಾದ ಮಾರುಕಟ್ಟೆ ಕೃಷ್ಣ, ಸಾಹುಕಾರ್ ಅವಿ, ಪುನೀತ್, ಪ್ರಶಾಂತ್, ಸಚ್ಚಿನ್, ದೀಪು, ಗಣೇಶ, ಚೇತು, ರಾಘವೇಂದ್ರ, ಸಿದ್ದರಾಜು, ಮಹೇಶ್ ಆಲಕೆರೆ, ಮಿಠಾಯಿ ಚಂದು, ಹನುಮೇಶ್, ಮಧು, ತರುಣ್, ಪ್ರವೀಣ್, ವಿದ್ಯಾಧರ್, ಜಗದೀಶ್, ಮಂಜು ಇತರರಿದ್ದರು.

ಕೇಳದೇ ವರ ಕೊಡುವ ದೈವ
ಟ್ರಸ್ಟ್‌ನ ಅಧ್ಯಕ್ಷ ನಟರಾಜು ಮಾತನಾಡಿ, ಸೈನಿಕರು ಗುಡಿಯಿಲ್ಲದಿದ್ದರೂ ಗಡಿಯಲ್ಲಿ ಕಾಯುವ ನಿಜವಾದ ದೈವ. ದೇವರು ಬೇಡಿದರೆ ವರವನ್ನು ಕೊಡುತ್ತಾರೆ. ಆದರೆ ದೇಶದ ಕೋಟ್ಯಂತರ ಜನರಿಗಾಗಿ ಗಡಿಯಲ್ಲಿ ನಿಂತು ಕಾಯುವ ಮೂಲಕ ಕೇಳದೆಯೇ ವರವನ್ನು ಸೈನಿಕರು ಕೊಡುತ್ತಾರೆ. ಇನ್ನು ಸುದೀರ್ಘ ಸೇವೆ ಸಲ್ಲಿಸಿ ತಾಯ್ನಡಿಗೆ ವಾಪಸಾಗುವ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಮುಂದಿನ ದಿನದಲ್ಲಿ ಅವರ ಕುಟುಂಬವರನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ಹಾರೈಸಿದರು.