ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ತಿಗಳ ಜನಾಂಗದಲ್ಲಿ ಒಗ್ಗಟ್ಟಿನ ಕೊರತೆ ಹೆಚ್ಚಾಗಿರುವುದರಿಂದ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದೇವೆ. ಇನ್ನಾದರೂ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ಉತ್ತಮ ಬದುಕನ್ನು ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಶ್ರೀ ಬಾಲಯೋಗಿ ಸಾಯಿ ಮಂಜುನಾಥ್ ಮಹಾರಾಜ್ ಹೇಳಿದರು.
ಹೋಬಳಿಯ ಬೂದಿಗೆರೆಯಲ್ಲಿ ಶ್ರೀ ದ್ರೌಪದಮ್ಮ ಶ್ರೀ ಧರ್ಮರಾಯಸ್ವಾಮಿ ಸಮಿತಿ ಹಮ್ಮಿಕೊಂಡಿದ್ದ ರಾಜ್ಯ ತಿಗಳರ ವಹ್ನಿಕುಲ ಕ್ಷತ್ರಿಯರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶ್ರೀ ಆದಿಶಕ್ತಿ ಮಹಾಸಂಸ್ಥಾನ ಮಠ ಶಿವನಾಪುರದ ಪೀಠಾಧಿಪತಿ ಶ್ರೀ ಪ್ರಾಣವಾನಂದಪುರಿ ಸ್ವಾಮೀಜಿ ಮಾತನಾಡಿ, ್ಲ ಜಾತಿ, ಭಾಷೆ ಮತ್ತು ನಾಡಿನ ಮೇಲಿನ ಅಭಿಮಾನವಿದ್ದಲ್ಲಿ ಎಲ್ಲ ಒಳಿತು ಸಾಧ್ಯವಾಗುತ್ತದೆ. ಜನಾಂಗದ ಯುವಕರಲ್ಲಿ ಶಿಕ್ಷಣ ಮತ್ತು ರಾಜಕೀಯವಾಗಿ ಮುಂದುವರಿಯುವಂತೆ ಅರಿವು ಮೂಡಿಸಿ, ಅವಕಾಶ ಕಲ್ಪಿಸಿಕೊಡಬೇಕು ಎಂದರು. ರಾಜ್ಯ ತಿಗಳರ ಸಂಘದ ನೂತನ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿನಿಲಯಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರ ಏರ್ಪಡಿಸುವ ಯೋಜನೆ ರೂಪಿಸಲಾಗುವುದು. ದ್ರೌಪದಿ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಶ್ರೀ ಶಾಂತ ಸಂಸ್ಕೃತಿ ನೃತ್ಯ ಕಲಾ ಅಕಾಡೆಮಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಿತಿ
ಗೌರವಾಧ್ಯಕ್ಷ ಜಿ.ಗಣೇಶಪ್ಪ, ಅಧ್ಯಕ್ಷ ಡಿ.ವಿ.ಕೆ.ವೆಂಕಟೇಶ್, ನೂತನ ಕೋಶಾಧ್ಯಕ್ಷ ಆದಿತ್ಯ ಬಾಬು, ಮುಖಂಡರಾದ ನಾರಾಯಣಸ್ವಾಮಿ, ಗಣೇಶಪ್ಪ, ವೆಂಕಟೇಶಪ್ಪ, ಜಂಕೋಟೆ, ಸಿ.ನಾರಾಯಣಪ್ಪ, ಎನ್.ನಾರಾಯಣಸ್ವಾಮಿ, ಕೋಟಿ ಬಿ.ಕೆ.ನಾರಾಯಣಸ್ವಾಮಿ, ಪಿ.ರವಿಕುಮಾರ್, ಜಿ.ನಾರಾಯಣಸ್ವಾಮಿ ಇದ್ದರು.