ಎಚ್.ಡಿ.ಕೋಟೆ: ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಶೋಷಿತ ವರ್ಗದ ಬೆಳಕಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ತಿಳಿಸಿರುವಂತೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಆದಿ ಕರ್ನಾಟಕ ಮಹಾಸಭಾದ ವತಿಯಿಂದ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಶೋಷಿತರಿಗೆ ಹಲವು ಸವಲತ್ತುಗಳು ದೊರಕಿವೆ. ಇಂದಿನ ದಿನಗಳಲ್ಲಿ ಹಲವು ನೂತನ ಯೋಜನೆಗಳನ್ನು ಜಾರಿಗೆ ತರಲು ಸಾಕಷ್ಟು ಕಷ್ಟವಿದೆ. ಅಂದಿನ ಕಾಲದಲ್ಲಿಯೇ ಶಿಕ್ಷಣದ ಮೂಲಕ ಸಾಕಷ್ಟು ಸುಧಾರಣೆ ತಂದಿದ್ದಾರೆ. ಸಾಮಾಜಿಕ ಹಕ್ಕುಗಳನ್ನು ಸಂವಿಧಾನದ ಮೂಲಕ ಅಂಬೇಡ್ಕರ್ ನೀಡಿದ್ದಾರೆ. ಅವರ ಬದುಕಿನ್ನುದ್ದಕ್ಕೂ ಸಾಕಷ್ಟು ಕಹಿನ್ನುಂಡು ನಮಗೆಲ್ಲ ಸಿಹಿ ನೀಡಿದ್ದಾರೆ. ಇಂದಿನ ಯುವ ಪೀಳಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ತಾಲೂಕು ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಹೈರಿಗೆ ಶಿವರಾಜ್ ಮಾತನಾಡಿ, ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದರೆ ದೇಶ ಪ್ರಗತಿ ಸಾಧಿಸಿದಂತೆ. ಆದ್ದರಿಂದ ತಾಲೂಕಿನಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕು. ತಾಲೂಕಿಗೆ ಮೂರು ನೂತನ ವಸತಿ ಶಾಲೆಗಳ ಅನಿವಾರ್ಯತೆಯಿದೆ. ಈಗಿರುವ ಐದು ವಸತಿ ಶಾಲೆಗಳನ್ನು ಮೇಲ್ದರ್ಜೆಗೇರಿಸಿ, ತಾಲೂಕಿನಲ್ಲಿ ಡಿಪ್ಲೊಮಾ ಕಾಲೇಜನ್ನು ತೆರೆಯಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದುಗೆ ಮನವಿ ಮಾಡಿದರು.
ಅಂತರಸಂತೆ ಬುದ್ಧ ವಿಹಾರದ ಗೌತಮಿ ಬಂತೆಂಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಆದಿ ಕರ್ನಾಟಕ ಮಹಾಸಭಾ ಸರಗೂರು ತಾಲೂಕು ಅಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯದರ್ಶಿ ಭೀಮನಹಳ್ಳಿ ಸೋಮೇಶ್, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಜಿ.ಪಂ ಮಾಜಿ ಸದಸ್ಯರಾದ ವೆಂಕಟಸ್ವಾಮಿ, ಎಚ್.ಸಿ.ಮಂಜುನಾಥ್, ಮುಖಂಡರಾದ ಬೆಟ್ಟಯ್ಯ ಕೋಟೆ, ಮುದ್ದು ಮಲ್ಲಯ್ಯ, ಚಂದ್ರಶೇಖರ್ ಮೂರ್ತಿ, ನಾಗೇಂದ್ರ, ಚಾ.ನಂಜುಂಡಮೂರ್ತಿ, ಡಾ.ನಾಗೇಂದ್ರ, ಮಧು, ಎಂ.ಡಿ.ಮಂಚಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜ್, ಅಜರ್, ಪುರಸಭೆ ಸದಸ್ಯರಾದ ಮಿಲ್ ನಾಗರಾಜ್, ಪ್ರೇಮ್ ಸಾಗರ್, ನಂಜಪ್ಪ, ಸೋಮಣ್ಣ, ವನಸಿರಿ ಉಮೇಶ್, ರವಿಚಂದ್ರ, ಪುಟ್ಟ ಮಾದು ಇದ್ದರು.