ಜಿಲ್ಲೆ

ಎರಡೂವರೆ ವರ್ಷದಲ್ಲಿ ಐವರು ಅಧ್ಯಕ್ಷರು!

ಬರಗೇನಹಳ್ಳಿ ಚಿಕ್ಕರಾಜು ದಾಬಸ್‌ಪೇಟೆ
ಎರಡೂವರೆ (30 ತಿಂಗಳು) ವರ್ಷದ ಅವಧಿಗೆ ಐವರು ಅಧ್ಯಕ್ಷರನ್ನು ಕಂಡ ಸೋಂಪುರ ಹೋಬಳಿಯ ಹೊನ್ನೇನಹಳ್ಳಿ ಪಂಚಾಯಿತಿ ಈಗ ಅಧಿಕಾರ ಕಿತ್ತಾಟಕ್ಕೆ ಕುಖ್ಯಾತಿ ಪಡೆದಿದೆ.
ಪಂಚಾಯಿತಿಯಲ್ಲಿ ಅಧ್ಯಕ್ಷ ಗಾದಿಗಾಗಿ ಮಿನಿ ಕುರುಕ್ಷೇತ್ರವೇ ನಡೆಯುತ್ತಿದ್ದು, ಇವರ ಕಾದಾಟಕ್ಕೆ ಪಂಚಾಯಿತಿ ಅಭಿವೃದ್ಧಿ ಮೂಲೆಗುಂಪಾಗಿದೆ. ಸಂವಿಧಾನದ ಮೂಲ ಉದ್ದೇಶವನ್ನೇ ಬುಡಮೇಲು ಮಾಡುತ್ತಿರುವ ಪಂಚಾಯಿತಿಯು ರಾಜಕೀಯ ವಿವಾದದ ಕೇಂದ್ರಬಿಂದು ಎನಿಸಿದೆ.
ಸ್ಥಳೀಯ ಮಟ್ಟದಲ್ಲೇ ಆಡಳಿತ ವಿಕೇಂದ್ರಿಕರಣವಾಗಬೇಕು, ಗ್ರಾಮೀಣ ಮಟ್ಟದಲ್ಲಿಯೇ ಆಡಳಿತ ಚುರುಕುಗೊಳ್ಳಬೇಕು, ಪಾರದರ್ಶಕ ಆಡಳಿತದ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂಬ ಉದ್ದೇಶದಿಂದ ಆರಂಭವಾದ ಗ್ರಾಪಂ ಆಡಳಿತ ಈಗ ಮೂಲ ಉದ್ದೇಶವನ್ನೇ ಮರೆಮಾಚುವ ಹಂತಕ್ಕೆ ಬಂದಿದೆ. ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ನಡೆಯುವಂತಹ ದೊಡ್ಡಮಟ್ಟದ ರಾಜಕೀಯ ಪ್ರಹಸನಗಳನ್ನೂ ಮೀರಿಸುವ ವಾತಾವರಣ ಗ್ರಾಪಂ ಮಟ್ಟದಲ್ಲೇ ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಜನರ ಬಾಯಿಗೆ ಹೊನ್ನೇನಹಳ್ಳಿ ಪಂಚಾಯಿತಿ ಆಹಾರವಾಗಿದೆ.

5 ರಿಂದ 2.5 ವರ್ಷ: ಈ ಹಿಂದೆ ಗ್ರಾಪಂ ಅಧ್ಯಕ್ಷರ ಅವಧಿ 5 ವರ್ಷಕ್ಕೆ ನಿಗದಿಯಾಗಿತ್ತು. ನಂತರದಲ್ಲಿ ಅದನ್ನು ಎರಡೂವರೆ ವರ್ಷಕ್ಕೆ ಹಂಚಿಕೆ ಮಾಡಲಾಯಿತು. ಸಾಮಾನ್ಯವಾಗಿ ಎಲ್ಲ ಪಂಚಾಯಿತಿಗಳಲ್ಲಿ ಇದೇ ಮಾದರಿ ನಡೆದುಕೊಂಡು ಬರುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿರುವ ಹೊನ್ನೇನಹಳ್ಳಿ ಪಂಚಾಯಿತಿ ಕೇವಲ ಎರಡೂವರೆ ವರ್ಷದಲ್ಲೇ ಐವರು ಅಧ್ಯಕ್ಷರನ್ನು ಕಾಣುವ ಮೂಲಕ ದಾಖಲೆ ಸೃಷ್ಟಿಸಿದೆ.

ಎಲ್ಲರಿಗೂ ಅಧ್ಯಕ್ಷ ಕುರ್ಚಿ ಮೇಲೆಯೇ ಕಣ್ಣು: ಗ್ರಾಮ ಪಂಚಾಯಿತಿಯಲ್ಲಿ 14 ಸದಸ್ಯರಿದ್ದು, ಹೊನ್ನೇನಹಳ್ಳಿ ಮತ ಕ್ಷೇತ್ರದಲ್ಲಿ ಮೂವರು ಸದಸ್ಯರು, ಬರಗೇನಹಳ್ಳಿಯಲ್ಲಿ 3, ಕೆಂಗಲ್‌ನಲ್ಲಿ 3, ಶ್ರೀಪತಿಹಳ್ಳಿಯಲ್ಲಿ 1, ವೀರಸಾಗರದಲ್ಲಿ 1 ಹಾಗೂ ಕೆಂಗಲ್ ಕೆಂಪೋಹಳ್ಳಿ ಹಾಗೂ ಕೆ.ಜಿ.ಶ್ರಿನಿವಾಸಪುರದಲ್ಲಿ ತಲಾ ಒಬ್ಬ ಸದಸ್ಯರಿದ್ದಾರೆ. ಈ ಎಲ್ಲ ಸದಸ್ಯರಿಗೂ ಅಧ್ಯಕ್ಷರ ಕುರ್ಚಿ ಮೇಲೆಯೇ ಕಣ್ಣು ಎನ್ನುವಂತಾಗಿದೆ. ಇದರಿಂದಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳೂ ಸಾಧ್ಯವಾಗುತ್ತಿಲ್ಲ. ಪಂಚಾಯಿತಿ ಅಧಿಕಾರಿಗಳೂ ಕಕ್ಕಾಬಿಕ್ಕಿಯಾಗುವಂತಾಗಿದೆ ಎಂಬ ಮಾತು ಕೇಳಿಬರುತ್ತಿದೆ.
ಹಣ ಪೋಲು: 5 ಬಾರಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ 2 ಬಾರಿ ಉಪಾಧ್ಯಕ್ಷ ಸ್ಥಾನಕ್ಕೆ ಸೇರಿ 7 ಬಾರಿ ಚುನಾವಣೆಗಾಗಿ ಲಕ್ಷಾಂತರ ರೂ. ಖರ್ಚಾಗಿದೆ. ಇಷ್ಟು ಹಣವನ್ನು ಕೆಲವೊಂದು ಅಭಿವೃದ್ಧಿ ಕೆಲಸಗಳಿಗಾಗಿ ವಿನಿಯೋಗಿಸಬಹುದಿತ್ತು ಎಂಬುದು ಸ್ಥಳೀಯರ ಮಾತಾಗಿದೆ. ಆಗಾಗ ಅಧ್ಯಕ್ಷರ ಬದಲಾವಣೆಯಿಂದಾಗಿ ತೆರಿಗೆ ವಸೂಲಿ ಸೇರಿ ಇನ್ನಿತರ ಪಂಚಾಯಿತಿ ಕಾರ್ಯಗಳ ಸಭೆ ನಡೆಸಲೂ ಸಾಧ್ಯವಾಗಿಲ್ಲ.

ಮೊದಲ ಅವಧಿಗೆ 7 ಜನ: ಮೊದಲ ಆವಧಿಗೆ ಕೆ.ಕೆ.ಮುರಳೀಧರ, ಟಿ.ಉಮೇಶ್, ಚಿಕ್ಕೇಗೌಡ, ಎಸ್.ಜಿ.ಶಿವನಂದಾ ಹಾಗೂ ಎಂ.ಚಂದ್ರಶೇಖರ್ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರೆ, ಉಪಾಧ್ಯಕ್ಷರಾಗಿ ಮಂಜುಳಾ ಹಾಗೂ ಪ್ರೇಮಾ ಅಧಿಕಾರ ಚುಕ್ಕಾಣಿ ಹಿಡಿದ್ದರು.


ಗ್ರಾಮಗಳ ಅಭಿವೃದ್ಧಿಗೆ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಎಲ್ಲರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಡುತ್ತಾರೆ. ಇದರಿಂದ ಪಂಚಾಯಿತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಸಾಧ್ಯವಾಗುತ್ತಿಲ್ಲ. ಇವರ ಜಿದ್ದಾಜಿದ್ದಿ ನಡುವೆ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಇಂಥ ಗುಣ ಬಿಟ್ಟು ಅಭಿವೃದ್ಧಿಯತ್ತ ಗಮನ ನೀಡಬೇಕು.
ಸುರೇಶ್, ಹೊನ್ನೇನಹಳ್ಳಿ ಗ್ರಾಮಸ್ಥ