ಜಿಲ್ಲೆ

ಮುಂದುವರಿದ ಮುಂಗಾರು ಆರ್ಭಟ, ನೆರೆಗೆ ನಲುಗಿದ ಹೊನ್ನಾವರ ತಾಲೂಕು

Gadag - Desk - Tippanna Avadoot

ಹೊನ್ನಾವರ: ಮಳೆಯ ಆರ್ಭಟ ಶುಕ್ರವಾರವೂ ಮುಂದುವರಿದಿದೆ. ತಾಲೂಕಿನ ನದಿ ತೀರದ ಪ್ರದೇಶಗಳು ಜಲಾವೃತವಾಗಿವೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಪರಿಣಾಮ ಗುಂಡಬಾಳ ಹಾಗೂ ಭಾಸ್ಕೇರಿ ನದಿ ತೀರದ ತಗ್ಗು ಪ್ರದೇಶದ ತೋಟ, ಮನೆಗಳಿಗೆ ನೀರು ನುಗ್ಗಿದೆ.
ಗುಂಡಬಾಳ ನದಿ ತೀರದ ಚಿಕ್ಕನಕೋಡ, ಗುಂಡಿಬೈಲ, ಕೆಂಚಗಾರ, ಗುಂಡಬಾಳ, ಹೆಬ್ಒ್ಯೆಲ್, ಮುಟ್ಟಾ ಹಾಡಗೇರಿ, ಹುಡಗೋಡ, ಕಡಗೇರಿ, ನಾಥಗೇರಿಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ವಿದ್ಯುತ್ ವ್ಯತ್ಯಯ ಮುಂದುವರಿದಿದ್ದು, ಗ್ರಾಮೀಣ ಭಾಗದ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ.
ತಾಲೂಕಿನ ಎಲ್ಲ ಶಾಲೆ, ಕಾಲೇಜುಗಳಿಗೆ ಶುಕ್ರವಾರ ರಜೆ ಘೊಷಿಸಲಾಗಿತ್ತು, ಈ ರಜೆಯನ್ನು ಶನಿವಾರವೂ ಮುಂದುವರಿಸಲಾಗಿದೆ. ಮುಂಗಾರು ಆರ್ಭಟ ಮುಂದುವರಿಯುವ ಮುನ್ಸೂಚನೆ ಹವಾಮಾನ ಇಲಾಖೆ ನೀಡಿರುವುದರಿಂದ ತಗ್ಗು ಪ್ರದೇಶದ ಜನರಿಗೆ ಆತಂಕದಲ್ಲಿ ಕಾಲಕಳೆಯುವಂತಾಗಿದೆ. ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಕಾಳಜಿ ಕೇಂದ್ರಗಳು: ಗುಂಡಬಾಳ ನದಿ ತೀರದ 6 ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಚಿಕ್ಕನಕೋಡ ಗ್ರಾಮದ ಗುಂಡಿಬೈಲ ನಂ.1 ಶಾಲೆಯಲ್ಲಿ 34 ಜನರು, ಗುಂಡಿಬೈಲ ನಂ. 2 ಶಾಲೆಯಲ್ಲಿ 57 ಜನರು, ಗುಂಡಬಾಳ ನಂ. 1 ಶಾಲೆ 46 ಜನರು, ಹೆಬೈಲ್ ಅಂಗನವಾಡಿ ಕೇಂದ್ರದಲ್ಲಿ 12, ಗುಂಡಬಾಳ ನಂ.2 ಶಾಲೆಯಲ್ಲಿ 12, ಹಡಿನಬಾಳ ಗ್ರಾಪಂ ವ್ಯಾಪ್ತಿಯ ಬೇರೊಳ್ಳಿಯಲ್ಲಿ 34 ಜನರು ಸೇರಿ ಈ ನಾಲ್ಕು ಕಾಳಜಿ ಕೇಂದ್ರಗಳಲ್ಲಿ 88 ಕುಟುಂಬಗಳ ಒಟ್ಟು 195 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ತಾಲೂಕು ಆಡಳಿತದಿಂದ ಸಂತ್ರಸ್ತರಿಗೆ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ.

ನೆರೆಪೀಡಿತ ಪ್ರದೇಶಗಳಿಗೆ ಸಚಿವರ ಭೇಟಿಗುಂಡಬಾಳ ನದಿ ತೀರದ ಚಿಕ್ಕನಕೋಡ, ಗುಂಡಿಬೈಲ ಮತ್ತಿತರ ಪ್ರದೇಶಗಳಿಗೆ ಸಚಿವ ಮಂಕಾಳ ವೈದ್ಯ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ನೆರೆಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಕೊರತೆಯ ಕುರಿತು ಸ್ಥಳೀಯರು ಬೇಡಿಕೆ ಸಲ್ಲಿಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರ ಅಹವಾಲು ಸ್ವೀಕರಿಸಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು. ಗುಂಡಿಬೈಲದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸ್ಥಳೀಯರೊಂದಿಗೆ ಸಭೆ ನಡೆಸಿದರು. ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ, ತಹಸೀಲ್ದಾರ ರವಿರಾಜ ದೀಕ್ಷಿತ್ ಉಪಸ್ಥಿತರಿದ್ದರು.