ಹೊನ್ನಾವರ : ಅವೈಜ್ಞಾನಿಕ ಕಾಮಗಾರಿ ಮಾಡಿ ಕರ್ತವ್ಯ ಲೋಪವೆಸಗಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಅಮಾನತುಗೊಳಿಸಿ ಬಂಧಿಸಬೇಕು ಮತ್ತು ಶಿರೂರು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಜನಪರ ಸಂಘಟನೆಗಳಿಂದ ಗುರುವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಶರಾವತಿ ವೃತ್ತದಲ್ಲಿ ಸೇರಿದ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹಾಗೂ ಪಟ್ಟಣದ ಮಾಸ್ತಿಕಟ್ಟೆ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಾಸ್ತಿಕಟ್ಟೆ ಸಮೀಪದ ಎನ್ಎಚ್ಎಐ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಬ್ಯಾರಿಕೇಡ್ ಹಾಕುವ ಮೂಲಕ ತಡೆದರು. ಬ್ಯಾರಿಕೇಡ್ ಅನ್ನು ತೆರವುಗೊಳಿಸುವಂತೆ ಜನರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಎನ್ಎಚ್ಎಐ ಸಿಬ್ಬಂದಿ ಅವೈಜ್ಞಾನಿಕ ಕಾಮಗಾರಿ ನಡೆಸಿ ಜನರ ಪ್ರಾಣದ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ. ಅವರನ್ನು ಅಮಾನತುಗೊಳಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅದರ ಹಿಂದೆ ಸಾಕಷ್ಟು ರಾಜಕಾರಣಿಗಳಿದ್ದಾರೆ, ಅವೈಜ್ಞಾನಿಕ ಕಾಮಗಾರಿ ಎನ್ನುತ್ತಾರೆ. ಆದರೆ, ಎನ್ಎಚ್ಎಐ ಮತ್ತು ಐಆರ್ಬಿ ವಿರುದ್ದ ಕ್ರಮ ಕೈಗೊಂಡಿಲ್ಲ. ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳ ಮನೆ ಮುಂದೆ ಹೋರಾಟ ನಡೆಸುತ್ತೇವೆ ಎಂದರು.
ಹೊನ್ನಾವರ ಉಳಿಸಿ ಸಂಘಟನೆ ಅಧ್ಯಕ್ಷ ಜಿ.ಎನ್. ಗೌಡ ಮಾತನಾಡಿ, ಹೊನ್ನಾವರ ಪಟ್ಟಣದಲ್ಲಿ ಹೆದ್ದಾರಿ ಕಾಮಗಾರಿ ಅಸ್ತವ್ಯಸ್ತವಾಗಿದೆ. ಕಾಸರಕೋಡ ಅವ್ಯವಸ್ಥೆಯಿಂದ ಕೂಡಿದೆ. ಇದಕ್ಕೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವೇ ನೇರ ಹೊಣೆಗಾರರು. ಕೂಡಲೇ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.
ಕರವೇ ತಾಲೂಕು ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ, ಅಧಿಕಾರವುಳ್ಳವರು ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನೆಯನ್ನು ಮೊಟಕುಗೊಳಿಸಲು ಯತ್ನಿಸುತ್ತಿದ್ದಾರೆ. ಸ್ವಾಮೀಜಿಯವರು ಅನುಮತಿ ನೀಡಿದರೆ ಹೆದ್ದಾರಿ ಅಧಿಕಾರಿಗಳ ಕಚೇರಿಯನ್ನು ಧ್ವಂಸಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿದರು.
ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ರಾಜ್ಯ ಯುವ ಘಟಕದ ಅಧ್ಯಕ್ಷ ಸಚಿನ್ ನಾಯ್ಕ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.
ಕೇರಳದ ಅರ್ಜುನ ಕುಟುಂಬದ ಪರ ಅಡ್ವೋಕೆಟ್ ರಾಜನ್, ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ಜಿಲ್ಲಾಧ್ಯಕ್ಷ ದೇವರಾಜ ನಾಯ್ಕ, ಕಾರ್ಯದರ್ಶಿ ರಾಜೇಶ ನಾಯ್ಕ, ಜನಪರ ಹೋರಾಟ ಸಂಘಟನೆಯ ಡಾ. ನಾಗೇಶ ನಾಯ್ಕ, ಕಾರ್ವಿುಕ ಸಂಘಟನೆಯ ಹರಿಶ್ಚಂದ್ರ ನಾಯ್ಕ ಹಾಗೂ ಶಿರೂರಿನ ಸಂತ್ರಸ್ತರು ಪಾಲ್ಗೊಂಡಿದ್ದರು.
ಕೆಳಗಿನೂರು ಗ್ರಾಪಂ ಅಧ್ಯಕ್ಷೆ ಚಿತ್ರಾಕ್ಷಿ ಗೌಡ, ಉಪಾಧ್ಯಕ್ಷ ಸುರೇಶ ಗೌಡ, ಅಯ್ಯಪ್ಪ ನಾಯ್ಕ, ಶ್ರೀನಿವಾಸ ನಾಯ್ಕ, ವಿವಿಧ ಸಂಘಟನೆಗಳ ಮುಖಂಡರು ಇದ್ದರು. ಸ್ಥಳಕ್ಕೆ ತಹಸೀಲ್ದಾರ್ ರವಿರಾಜ ದೀಕ್ಷಿತ ಆಗಮಿಸಿ ಮನವಿ ಸ್ವೀಕರಿಸಿದರು. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭದ್ರತೆ ಕೈಗೊಂಡಿದ್ದರು.