ಜಿಲ್ಲೆ

ಒಳ್ಳೆಯ ಕೆಲಸಗಳಿಗೆ ಶಕ್ತಿ ವಿನಿಯೋಗದಿಂದ ಪುಣ್ಯ ಪ್ರಾಪ್ತಿ

ಹೊನ್ನಾವರ: ಪ್ರತಿಯೊಬ್ಬರೂ ಧರ್ಮ ಆಚರಣೆ ಮಾಡಬೇಕು. ಪುಣ್ಯ ಇದ್ದರೆ ಎಲ್ಲ ಸುಖ ಅನುಭವಿಸಬಹುದು. ದೇವರ ಸೇವೆ ಮತ್ತು ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ರಥಬೀದಿಯಲ್ಲಿರುವ ಶ್ರೀ ಶಾರದಾಂಬಾ ಹಾಗೂ ಚಂದ್ರಮೌಳೀಶ್ವರ ದೇವಸ್ಥಾನದ ನವೀಕೃತ ಶಿಲಾ ಮಂದಿರ ಲೋಕಾರ್ಪಣೆ, ದೇವರ ಪ್ರತಿಷ್ಠಾ ಮಹೋತ್ಸವದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ನಮ್ಮ ಪರಂಪರೆಯ ಬಗ್ಗೆ ಶ್ರದ್ಧಾ ಭಕ್ತಿ ಹೊಂದಿರಬೇಕು. ಧರ್ಮ ಆಚರಣೆಯಿಂದ ಪುಣ್ಯಫಲ ಸಿಗುತ್ತದೆ. ವಿದ್ಯೆ, ಐಶ್ವರ್ಯ, ಅಧಿಕಾರ ಇದ್ದರೂ ಪುಣ್ಯ ಇಲ್ಲದಿದ್ದರೆ ಯಾವುದರಲ್ಲೂ ಸುಖ ಸಿಗುವುದಿಲ್ಲ. ಭಗವಂತ ಎಲ್ಲರಿಗೆ ಎಲ್ಲವನ್ನೂ ಕೊಟ್ಟಿರುವುದಿಲ್ಲ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಸಾಮರ್ಥ್ಯ ನೀಡಿರುತ್ತಾನೆ. ದೇವರ ಸೇವೆ ಮತ್ತು ಇನ್ನೊಬ್ಬರಿಗೆ ಒಳಿತು ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದರು.

ಇಲ್ಲಿ ‘ಶಂಕರ ಭಗವತ್ಪಾದರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಧರ್ಮ ಸಂರಕ್ಷಣೆ ಮಾಡಿದ ಮತ್ತು ಉಪದೇಶ ನೀಡಿದ ಗುರುಗಳಲ್ಲಿ ಶಂಕರರು ಅಗ್ರಮಾನ್ಯರು. ಸನಾತನ ಹಿಂದು ಧರ್ಮ ವ್ಯವಸ್ಥಿತವಾಗಿ ಮುನ್ನಡೆಯಲು ಕಾರಣರು ಶಂಕರರು. ಜ್ಞಾನ ನಿಡುವ ಶಾರದಾಂಬೆ ವಿರಾಜಮಾನವಾಗಿ ಭಕ್ತರಿಗೆ ಅನುಗ್ರಹ ನೀಡುತ್ತಿದ್ದಾಳೆ. ಶಾರದಾಂಬೆ ಮತ್ತು ಚಂದ್ರಮೌಳೀಶ್ವರ ದೇವರ ಅನುಗ್ರಹ ಎಲ್ಲರಿಗೂ ಸಿಗಲಿ’. ‘ಚಾರೋಡಿ ಮೇಸ್ತ ಸಮಾಜವು ಮಠದ ಅನುಗ್ರಹಕ್ಕೆ ಪಾತ್ರವಾಗಿದೆ. ಮೆರವಣಿಗೆ ಉತ್ಸವ ಅಚ್ಚುಕಟ್ಟಾಗಿ ನಡೆದಿದೆ. ಇದು ಇಲ್ಲಿಯವೆರೆಗೆ ನಡೆದ ಅತ್ಯಂತ ದೊಡ್ಡ ಮೆರವಣಿಗೆ’ ಎಂದು ಶೋಭಾಯಾತ್ರೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿದ್ವಾಂಸ ಪತಂಜಲಿ ವೀಣಾಕರ ಅಭಿನಂದನಾ ಪತ್ರ ವಾಚಿಸಿದರು. ದೇವಸ್ಥಾನದ ಟ್ರಸ್ಟಿ ಲಕ್ಷ್ಮಣ ಮೇಸ್ತ ಹಾಗೂ ಸಮಾಜ ಬಾಂಧವರು ನಮನ ಸಲ್ಲಿಸಿದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುಬ್ರಾಯ ಮೇಸ್ತ ಮಾತನಾಡಿದರು. ಉದಯ ಮೇಸ್ತ ಸ್ವಾಗತಿಸಿದರು. ಸೋಮು ಮೇಸ್ತ ನಿರ್ವಹಿಸಿದರು. ಪ್ರದೀಪ ಮೇಸ್ತ, ಪಾಂಡುರಂಗ ಮೇಸ್ತ, ನಾಗೇಶ ಮೇಸ್ತ, ಉದಯ ಮೇಸ್ತ, ತುಳಸೀದಾಸ ಮೇಸ್ತ, ಯೋಗೇಶ ಮೇಸ್ತ, ಚಾರೋಡಿ ಸಮಾಜದ ಮುಖಂಡರು, ಭಕ್ತರು ಪಾಲ್ಗೊಂಡಿದ್ದರು.

ಶುಕ್ರವಾರ ಬೆಳಗ್ಗೆ ಶ್ರೀಗಳ ಅಮೃತ ಹಸ್ತದಿಂದ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಶಾರದಾಂಬಾ ದೇವಿ, ಶ್ರೀ ಚಂದ್ರಮೌಳೀಶ್ವರ, ಪುನಃ ಪ್ರತಿಷ್ಠಾ ಕುಂಭಾಭಿಷೇಕ, ಶಿಖರ ಕಲಶಾಭಿಷೇಕ, ಪೂಜೆ ನಡೆಯಿತು. ಶಂಕರಾಚಾರ್ಯರ ಮೂರ್ತಿಪ್ರತಿಷ್ಠಾಪಿಸಲಾಯಿತು.