ಹೊನ್ನಾಳಿ: ಯಾವುದೇ ರಾಜಕೀಯ ತಾರತಮ್ಯ ಮಾಡದೆ ಅವಳಿ ತಾಲೂಕಿನ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.
ಮಹರ್ಷಿ ವಾಲ್ಮೀಕಿ ಭವನದಲ್ಲಿ ಗುರುವಾರ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಮನವಿ ಸ್ವೀಕರಿಸಿ, ಮಾತನಾಡಿದರು.
ನಾನು ಐದು ವರ್ಷಗಳ ಕಾಲ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಯಾವುದರಲ್ಲೂ ರಾಜಕೀಯ ಮಾಡುವುದಿಲ್ಲವೆಂದರು.
ಇದೇ ಸಂದರ್ಭದಲ್ಲಿ ಸ್ವಸಹಾಯಗಳ ಸಂಘದ ಸಾಲಮನ್ನಾ ಮಾಡಬೇಕೆಂದು ಮಹಿಳೆಯರು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು, ನಾವು ಚುನಾವಣೆಗೆ ಮುಂಚೆ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದೆವು. ಅದರಂತೆ ಶೀಘ್ರ ಸಾಲಮನ್ನಾ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ವಾಲ್ಮೀಕಿ ಸಮುದಾಯ ಭವನದ ಬಾಕಿ ಇರುವ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಮಂಜೂರು ಮಾಡಿಸಬೇಕಿದೆ ಎಂದು ಮನವಿ ಮಾಡಿದ್ದೀರಿ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚೆ ಮಾಡುತ್ತೇನೆ ಹಾಗೂ ಸಚಿವರ ಜತೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ವಾಲ್ಮೀಕಿ ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬೇಲಿಮಲ್ಲೂರು ಶಿವಾನಂದ್ ಮಾತನಾಡಿ, ವಾಲ್ಮೀಕಿ ಭವನದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಈ ಚುನಾವಣೆಯಲ್ಲಿ ನಮ್ಮ ಸಮಾಜ ನಿಮ್ಮ ಕೈ ಹಿಡಿದಿದೆ. ಆದ್ದರಿಂದ ನಿಮ್ಮ ಅಧಿಕಾರವಧಿಯಲ್ಲಿ ಭವನಕ್ಕೆ ಅನುದಾನ ಕೊಡಿಸಿ ಎಂದು ಮನವಿ ಮಾಡಿದರು.
ಇದೇ ವೇಳೆ ತಾಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಶಾಸಕ ಡಿ.ಜಿ. ಶಾಂತನಗೌಡ ಅವರನ್ನು ಸನ್ಮಾನಿಸಿದರು. ಮಾಜಿ ಅಧ್ಯಕ್ಷ ಕುಳಗಟ್ಟೆ ರಂಗನಾಥ್, ಕೋಣನತಲೆ ನಾಗಪ್ಪ, ಶೇಖರಪ್ಪ, ಅಬಕಾರಿ ಇಲಾಖೆ ಡಿವೈಎಸ್ಪಿ ಮುರುಡೇಶ್, ಎಂ.ಆರ್. ಹನುಮಂತಪ್ಪ, ಚಂದ್ರಪ್ಪ, ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಕೆ.ಆರ್. ರುದ್ರಪ್ಪ, ಜಗದೀಶ್, ಪುರಸಭಾ ಸದಸ್ಯ ರಾಜೇಂದ್ರ, ನೀಲಮ್ಮ, ಆಂಜನೇಯ ಇತರರು ಇದ್ದರು.