ಜಿಲ್ಲೆ

ತುಂಗಭದ್ರಾ ನೀರಿನ ಮಟ್ಟ ಏರಿಕೆ; ಹೊನ್ನಾಳೀಲಿ 20 ಮನೆಗಳು ಜಲಾವೃತ

Chitradurga

ಹೊನ್ನಾಳಿ: ತುಂಗಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿ ಪಟ್ಟಣದ ಬಾಲ್‌ರಾಜ್‌ಘಾಟ್‌ನಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಗುರುವಾರ ರಾತ್ರಿಯೇ 23 ಕುಟುಂಬಗಳನ್ನು ಸಮೀಪದ ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಗೊಳಿಸಲಾಗಿದೆ.

ಜಿಲ್ಲಾಧಿಕಾರಿ ಶಿವಾನಂದ್ ಕಪಾಶಿ, ತಹಸೀಲ್ದಾರ್ ರಶ್ಮಿ, ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ಸ್ಥಳಕ್ಕೆ ಭೇಟಿ ನೀಡಿ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಿದರು.

ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಗುರುವಾರ 9.80 ಮೀಟರ್ ಇದ್ದ ತುಂಗಭದ್ರಾ ನದಿ ನೀರಿನಮಟ್ಟ ಶುಕ್ರವಾರ ಬೆಳಗ್ಗೆ 11.56 ಮೀಟರ್ ನಷ್ಟು ಏರಿಕೆಯಾಗಿದೆ. ಶುಕ್ರವಾರ ರಾತ್ರಿ ವೇಳೆಗೆ 12 ಮೀಟರ್‌ಗೆ ತಲುಪುವ ಸಾಧ್ಯತೆಯಿದ್ದು, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನದಿಪಾತ್ರದ ಜನರಿಗೆ ತಾಲೂಕು ಆಡಳಿತ ಸೂಚಿಸಿದೆ. ಸದ್ಯ ಭದ್ರಾ ಜಲಾಶಯದಿಂದ 47 ಸಾವಿರ ಹಾಗೂ ತುಂಗಾದಿಂದ 61 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ.

ಮಳೆಯಿಂದ ಸಮಸ್ಯೆಗೆ ಒಳಗಾದ 113 ಜನರಿಗೆ ಕಾಳಜಿ ಕೇಂದ್ರದಲ್ಲಿ ಊಟ, ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವೈದ್ಯರ ತಂಡ ಬೀಡು ಬಿಟ್ಟಿದೆ ಎಂದು ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ ತಿಳಿಸಿದ್ದಾರೆ.