ಜಿಲ್ಲೆ

ಕೋವಿಡ್ ಬಳಿಕ ಶಿಕ್ಷಣ ವ್ಯವಸ್ಥೆ ಕುಸಿತ

ಶ್ರೀ ಹಿರೇಕಲ್ಮಠದ ಸ್ವಾಮೀಜಿ ಅಭಿಪ್ರಾಯ I ಹೊನ್ನಾಳಿಯಲ್ಲಿ ಶಿಕ್ಷಕರ ದಿನಾಚರಣೆ

ಹೊನ್ನಾಳಿ: ಕೋವಿಡ್ ನಂತರದ ದಿನಗಳಲ್ಲಿ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಕುಸಿತ ಕಂಡಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಪಟ್ಟಣದ ಪಂಚಾಚಾರ್ಯ ಸಮುದಾಯ ಭವನದಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ ಡಾ. ಎಸ್. ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಆನ್‌ಲೈನ್ ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಅವರನ್ನು ಹಾಳು ಮಾಡುವ ವ್ಯವಸ್ಥೆಗೆ ನಾಂದಿ ಹಾಡಿದಂತಾಗಿದೆ. ಇನ್ನು ಮುಂದಾದರೂ ಇದಕ್ಕೆ ಕಡಿವಾಣ ಹಾಕಬೇಕು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು ಹೆಚ್ಚು ಶ್ರಮವಹಿಸಬೇಕು ಎಂದರು.

ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಎಷ್ಟೋ ವಿದ್ಯಾರ್ಥಿಗಳಿಗೆ ಕನ್ನಡ ಅಕ್ಷರಮಾಲೆ ಬರೆಯಲು ಬರುತ್ತಿಲ್ಲ. ಇದಕ್ಕೆ ಯಾರು ಕಾರಣ? ಶಿಕ್ಷಕರೋ, ಪಾಲಕರೋ ಅಥವಾ ವಿದ್ಯಾರ್ಥಿಗಳೋ? ಎಂದು ಪ್ರಶ್ನಿಸಿದರು.

1ನೇ ತರಗತಿಯಿಂದಲೇ ಮಕ್ಕಳಿಗೆ ಅಕ್ಷರಮಾಲೆ ಕಲಿಸಿ. ಇಲ್ಲದಿದ್ದರೆ ಇಡೀ ವಿದ್ಯಾರ್ಥಿ ಜೀವನವೇ ಹಾಳಾಗಲಿದೆ. ಅದಕ್ಕೆ ಶಿಕ್ಷಕರು ಆಸ್ಪದೆ ಕೊಡದೆ ಕಿರಿಯ ಪ್ರಾಥಮಿಕ ಹಂತದಲ್ಲೇ ಮೂಲ ಶಿಕ್ಷಣ ಕೊಡಬೇಕು ಎಂದರು.

ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಉತ್ತಮಪಡಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿಪಂ ಸಿಇಒಗೆ ವಚನ ನೀಡಿದ್ದಾರೆ. ಅವರಿಗೆ ಸಂಪೂರ್ಣ ಸಹಕಾರ ಕೊಡುತ್ತೇನೆ. ಈ ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಆಗಬೇಕು ಎಂದರು.

ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ. ನಿಂಗಪ್ಪ ಮಾತನಾಡಿ, ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆಗೆ ಉತ್ತಮ ಫಲಿತಾಂಶ ತರುವಲ್ಲಿ ಎಲ್ಲ ಶಿಕ್ಷಕರು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದರು.

ಉಪನ್ಯಾಸಕ ಭೀಮಾನಾಯ್ಕ, ಉಪವಿಭಾಗಾಧಿಕಾರಿ ವಿ. ಅಭಿಷೇಕ್, ತಾಪಂ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಮಾತನಾಡಿದರು. 2023-24ನೇ ಸಾಲಿನ ಪ್ರಶಸ್ತಿ ಪುರಸ್ಕೃತ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವಿ, ನ್ಯಾಮತಿಯ ಸಂತೋಷ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಗೀತಾ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ರವಿಗೌಡ, ನೌಕರರ ಗೃಹನಿರ್ಮಾಣ ಮಂಡಳಿ ಅಧ್ಯಕ್ಷ ಅರುಣ್‌ಕುಮಾರ್, ಸಾವಿತ್ರಿಬಾಯಿ ಪುಲೆ ಸಂಘದ ರಾಜ್ಯ ಪ್ರತಿನಿಧಿ ರಂಜಿತಾ, ತಾಲೂಕು ಅಧ್ಯಕ್ಷೆ ಷಹಜಾನ್ ಇತರರಿದ್ದರು.