ಜಿಲ್ಲೆ

ಗ್ರಾಮ ಪಂಚಾಯ್ತಿವಾರು ತ್ಯಾಜ್ಯ ವಿಲೇ ಘಟಕ

Davangere - Desk - Basavaraja P

ಶುಚಿತ್ವ, ಜನರ ಆರೋಗ್ಯ ರಕ್ಷಣೆಗೆ ಒತ್ತು I ಶಾಸಕ ಡಿ.ಜಿ.ಶಾಂತನಗೌಡ ಹೇಳಿಕೆ

ನ್ಯಾಮತಿ: ಪರಿಸರ ಸ್ವಚ್ಛತೆ, ಜನರ ಆರೋಗ್ಯ ಕಾಪಾಡುವ ಸದುದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಸವಳಂಗ ಗ್ರಾಮದಲ್ಲಿ ಶುಕ್ರವಾರ, ನೂತನ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಮನೆಯ ಸುತ್ತಲಿನ ಪ್ರದೇಶ ಸ್ವಚ್ಛತೆ ಜತೆ ವೃದ್ಧರ ಆರೋಗ್ಯ ರಕ್ಷಣೆಯ ಉದ್ದೇಶ ಹೊಂದಲಾಗಿದೆ. ಮಹತ್ವದ ಯೋಜನೆಯನ್ನು ಸಮರ್ಪಕವಾಗಿ ನಿರ್ವಹಿಸಿ ಕಸಮುಕ್ತ ಗ್ರಾಮವಾಗಿ ಮಾಡಿದರೆ ಕೇಂದ್ರ, ರಾಜ್ಯ ಸರ್ಕಾರದ ಉದ್ದೇಶ ಈಡೇರುತ್ತದೆ ಎಂದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಕಾಲಕ್ಕೆ ಕರ ವಸೂಲಿ ಮಾಡಿದರೆ ಕಸ ನಿರ್ವಹಣೆ ಕೆಲಸಗಾರರಿಗೆ ವೇತನ ನೀಡಬಹುದು. ಈ ನಿಟ್ಟಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನ ಹರಿಸಬೇಕು ಎಂದರು.

ಗ್ರಾಮದ ಸಮಸ್ಯೆಗಳನ್ನು ಎಲ್ಲರೂ ಸೇರಿ ಪರಿಹರಿಸೋಣ. ನಾನು ಪಕ್ಷಾತೀತವಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ನೀವು ಸಹ ಸಮಸ್ಯೆ ಹೊತ್ತು ಬಂದವರಿಗೆ ಸ್ಪಂದಿಸಿದರೆ ಗೌರವ ಹೆಚ್ಚಾಗುತ್ತದೆ ಎಂದರು.

ಸರ್ಕಾರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಆದೇಶ ಹೊರಡಿಸಿದೆ. ಈ ಬಗ್ಗೆ ರೈತರಲ್ಲಿ ತಪ್ಪು ಕಲ್ಪನೆ ಬೇಡ. ಉಚಿತ ವಿದ್ಯುತ್ತನ್ನು ತೆಗೆದು ಹಾಕುವ ಉದ್ದೇಶವಿಲ್ಲ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಮಾಡುವುದು ಮುಖ್ಯವಲ್ಲ. ಕಸಮುಕ್ತ ಗ್ರಾಮ ಮಾಡಿದರೆ ಘಟಕ ಸ್ಥಾಪನೆ ಸಾರ್ಥಕವಾಗಲಿದೆ. ಮಾದರಿ ಗ್ರಾಮ ನಿರ್ಮಾಣಕ್ಕೆ ನನ್ನ ಸಹಕಾರವಿದೆ ಎಂದರು.

ಗ್ರಾಪಂ ಅಧ್ಯಕ್ಷ ಗಿರೀಶ್ ಪಟೇಲ್ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ವಹಿಸುವ ಒಕ್ಕೂಟದ ಎಲ್ಲ ಮಹಿಳೆಯರಿಗೂ ಸಕಾಲಕ್ಕೆ ವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.

ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ಬಸವರಾಜಪ್ಪ, ರಾಜಪ್ಪ, ನಾಗರಾಜ್ ನಾಯ್ಕ, ಕೃಷ್ಣಪ್ಪ, ಲಲಿತಮ್ಮ, ನೇತ್ರಾವತಿ, ಗಾಯತ್ರಿ, ವಸಂತ, ನೀಲಾಬಾಯಿ, ರತ್ನಮ್ಮ, ರುಕ್ಮಿಣಿಬಾಯಿ, ಪಿಡಿಒ ವೇದಾವತಿ, ಕಾರ್ಯದರ್ಶಿ ಅಂಜುನಾಯ್ಕ, ಕಾಂಗ್ರೆಸ್ ಮುಖಂಡ ಪೀರ್ಯಾನಾಯ್ಕ ಇತರರು ಇದ್ದರು.