ಹೊನ್ನಾಳಿ: ತಾಲೂಕಿನ ದಿಡಗೂರು ಸಮೀಪದ ರಸ್ತೆ ವಿಭಜಕಕ್ಕೆ ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ತಲೆಪೆಟ್ಟಿಗೊಳಗಾದ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರು-ದಾವಣಗೆರೆ ಮಾರ್ಗದ ಕೆಎಸ್‌ಆರ್‌ಟಿಸಿ ಬಸ್ ಶಿವಮೊಗ್ಗದಿಂದ ಹೊನ್ನಾಳಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಗಾಯಾಳುಗಳ ಚಿಕಿತ್ಸೆಗಾಗಿ 35 ಸಾವಿರ ರೂ.ಗಳನ್ನು ನಿಗಮದಿಂದ ಪರಿಹಾರ ನೀಡಲಾಗಿದೆ. ನಿದ್ದೆ ಮಂಪರಿನಲ್ಲಿದ್ದ ಬಸ್ ಚಾಲಕನಿಂದಾಗಿ ಅಪಘಾತವಾಗಿದೆ ಎಂದು ಕೆಎಸ್‌ಆರ್‌ಟಿಸಿ ಬಸ್ ಡಿಪೋದ ವ್ಯವಸ್ಥಾಪಕ ಮಹೇಶ್ವರಪ್ಪ ತಿಳಿಸಿದ್ದಾರೆ.
ಈ ಭಾಗದಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಚಾಲಕರಿಗೆ ಮಾರ್ಗಸೂಚಿಯಾಗಿ ಅಪಘಾತ ವಲಯ ಎಂದು ನಾಮಫಲಕ ಹಾಕಬೇಕು ಎಂದು ದಿಡಗೂರು, ಹರಳಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.