ಜಿಲ್ಲೆ

ಹೊನ್ನಾಳಿಯಲ್ಲಿ ಬೀರಪ್ಪ ದೇವರ ಕೆಂಡಾರ್ಚನೆ

ಹರ್ಷ ನ.ಪುರೋಹಿತ

ಹೊನ್ನಾಳಿ: ಪಟ್ಟಣದ ದೊಡ್ಡಕೇರಿಯ ಶ್ರೀ ಬೀರಲಿಂಗೇಶ್ವರ ದೇವರ ಕಾರ್ತಿಕೋತ್ಸವದ ಅಂಗವಾಗಿ ಡಿ.10 ರಂದು ಬೀರಪ್ಪ ದೇವರ ಕೆಂಡಾ ರ್ಚನೆ, ಮುಳ್ಳುಗದ್ದುಗೆ ಉತ್ಸವ ಮತ್ತು ವೀರಭದ್ರ ದೇವರ ಗುಗ್ಗಳ ಮಹೋತ್ಸವ ಮಂಗಳವಾರ ಸಂಭ್ರಮದಿಂದ ಜರುಗಿತು.

ಭಾನುವಾರ ಶ್ರೀ ಬೀರಪ್ಪ ದೇವರ ಕದಳಿ ಮಹೋತ್ಸವ, ಸೋಮವಾರ ಬೀರಪ್ಪ ದೇವರ ಪವಾಡ ಕಾರ್ಯಕ್ರಮ ನಡೆಯಿತು. ಮಂಗಳವಾರ ಬೆಳಗ್ಗೆ ಶ್ರೀ ಬೀರಪ್ಪ ದೇವರು, ಸುಡುಗಾಡು ಸಿದ್ದಪ್ಪ ದೇವರು, ಪೇಟೆ ವೀರಭದ್ರ ದೇವರು, ಶ್ರೀ ಹಳದಮ್ಮ ದೇವಿ, ಗೋಪಗೊಂಡನಹಳ್ಳಿ ಬೀರಪ್ಪ ದೇವರ ಮೂರ್ತಿ ಹಾಗೂ ಗಾಳಿ ದುರ್ಗಮ್ಮ ದೇವರನ್ನು, ಅಲಂಕರಿಸಿದ್ದ ಪಲ್ಲಕ್ಕಿಗಳಲ್ಲಿ ಹೊತ್ತುಕೊಂಡ ಭಕ್ತರು ತುಂಗಭದ್ರಾ ನದಿ ಬಳಿ ಪೂಜೆಗಾಗಿ ತೆರಳಿದರು.

ನದಿಯಲ್ಲಿ ದೇವರ ಮೂರ್ತಿಗಳಿಗೆ ಅಭಿಷೇಕ, ಸಕಲ ಪೂಜಾ ವಿಧಿವಿಧಾನ ಮಾಡಲಾಯಿತು. ಪೂಜೆ ವೇಳೆ ಡೊಳ್ಳುಗಳ ಶಬ್ದಕ್ಕೆ ಬೀರಪ್ಪ ದೇವರ ಗಣಮಕ್ಕಳಾದ ಶ್ರೀ ಪ್ರಭುಸ್ವಾಮಿ ಹಾಗೂ ಶ್ರೀ ಅಣ್ಣಪ್ಪಸ್ವಾಮಿ ಅವರ ಮೇಲೆ ದೇವರು ಆವಾಹನೆಯಾಗಿ ಕ್ರಮವಾಗಿ ಮುಳ್ಳುಗದ್ದುಗೆ ಹಾಗೂ ಮೊಳೆಪಲ್ಲಕ್ಕಿ ಮೇಲೆ ಆಸೀನರಾದರು.

ಮುತ್ತೈದೆಯರು, ದೇವರ ಸೇವೆಗಾಗಿ ಮೀಸಲಿದ್ದವರು, ದೇವರ ಪಲ್ಲಕ್ಕಿ ಹೊತ್ತವರು ಸಾಲಾಗಿ ತುಂಗಭದ್ರಾ ನದಿಯಿಂದ ಪುರಪ್ರವೇಶ ಮಾಡಿದರು.

ಪಟ್ಟಣದ ದುರ್ಗಮ್ಮ ದೇವಸ್ಥಾನದ ಮುಂಭಾಗದ ಹೊಂಡದಲ್ಲಿ ಕೆಂಡವನ್ನು ಹಾಯುವ ಮೂಲಕ ದೇವರ ಗಣಮಕ್ಕಳು ಭಕ್ತರಿಗೆ ಕೆಂಡ ಹಾಯುವುದಕ್ಕೆ ಸೂಚನೆ ಕೊಟ್ಟರು. ಹರಕೆ ಹೊತ್ತ ಸಾವಿರಾರು ಜನರು ಕೆಂಡ ಹಾಯ್ದು ಹರಕೆ ತೀರಿಸಿದರು.

ನಂತರ ದೇವರ ಮೂರ್ತಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ದೊಡ್ಡಕೇರಿ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಆಸೀನವಾದವು. ಪ್ರಸಾದ ಸೇವೆ ಮಾಡಲಾಗಿತ್ತು.

 ಮೂರು ದಿನ ಕುಸ್ತಿ ಪಂದ್ಯಾವಳಿ

ಕಾರ್ತಿಕೋತ್ಸವದ ಅಂಗವಾಗಿ ಬುಧವಾರದಿಂದ 13 ರವರೆಗೆ ಬಯಲು ಜಂಗೀಕುಸ್ತಿ ಪಂದ್ಯ ಆಯೋಜಿಸಲಾಗಿದೆ. ರಾಜ್ಯ ವಿವಿಧೆಡೆಗಳಿಂದ ಬರುವ ಕುಸ್ತಿಪಟುಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಭಾಗವಹಿಸಿ ಕುಸ್ತಿ ಪಂದ್ಯ ವೀಕ್ಷಣೆ ಮಾಡುವಂತೆ ಕಮಿಟಿಯವರು ಮನವಿ ಮಾಡಿದ್ದಾರೆ.