ಹೊನ್ನಾಳಿ: ರಾಜ್ಯದಲ್ಲಿ ಉತ್ತಮ ಸಾಧನೆಗಾಗಿ ಬಿಜೆಪಿ- ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ ಎಂದು ಶಿಕ್ಷಕರ ಕ್ಷೇತ್ರದ ನೂತನ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಬುಧವಾರ ಹೊನ್ನಾಳಿ- ನ್ಯಾಮತಿ ತಾಲೂಕುಗಳ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಜನಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಈ ಮೈತ್ರಿ ಉಭಯ ಪಕ್ಷಗಳ ಮುಂಚೂಣಿ ನಾಯಕರಿಗಿಂತ ಕೆಳಮಟ್ಟದ ಕಾರ್ಯಕರ್ತರಲ್ಲಿ ಪ್ರಭಾವಗೊಂಡು ಹೊಂದಾಣಿಕೆ ಏರ್ಪಟ್ಟ ಕಾರಣ ಚುನಾವಣೆಯಲ್ಲಿ ಯಶಸ್ವಿ ಕಾಣಲು ಸಹಕಾರಿಯಾಗಿದೆ ಎಂದರು.
ಮುಂದಿನ ದಿನಗಳಲ್ಲೂ ತಾಲೂಕು ಮತ್ತು ಜಿಪಂ ಚುನಾವಣೆಗಳಲ್ಲೂ ಇದೇ ಮೈತ್ರಿ ಮುಂದುವರಿಯಲಿದ್ದು, ಇನ್ನೂ ಹೆಚ್ಚಿನ ಯಶಸ್ಸು ಕಾಣಬಹುದಾಗಿದೆ ಎಂದು ಹೇಳಿದರು.
ಇಂದು ಭಾರತ ನೈಜ ಭೂಪಟದಂತೆ ದೇಶ ಉಳಿದಿಲ್ಲ. ಹಾಗೇನಾದರೂ ದೇಶ ನೈಜ್ಯ ಭೂಪಟದಂತೆ ತನ್ನ ವಿಸ್ತೀರ್ಣ, ಆಕಾರ ಕಂಡುಕೊಳ್ಳಬೇಕಾದರೆ ಅದು ಈ ದೇಶದ ಪ್ರಧಾನಿ ನರೇಂದ್ರ ಮೋದಿ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದರು.
ಪ್ರಸ್ತುತ ದಿನಗಳಲ್ಲಿ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಂವಿಧಾನದಡಿ ಕೆಲವು ಚುನಾವಣೆಗಳು ನಡೆಯದಿರುವುದು ವಿಪರ್ಯಾಸದ ಸಂಗತಿ. ಎಲ್ಲ ಚುನಾವಣೆಗಳು ಸಂವಿಧಾನದ ಆಶಯ ಮತ್ತು ಮಾರ್ಗಸೂಚಿಗಳಂತೆ ನಡೆಯಬೇಕು ಎಂದು ಹೇಳಿದರು.
ಪದವೀಧರ ಕ್ಷೇತ್ರದ ವಿಧಾನ ಪರಿಷತ್‌ನ ನೂತನ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಅಸೂಯೆಯಿಂದ ಕುದಿಯುವ ಮನುಷ್ಯ ಆವಿಯಾಗುತ್ತಾನೆ. ಉರಿದುಕೊಳ್ಳುವವರು ಬೂದಿಯಾಗುತ್ತಾರೆ ಎಂದು ಚುನಾವಣೆ ವೇಳೆ ತಮ್ಮ ಬಗ್ಗೆ ಸುಳ್ಳು ಆರೋಪ, ಅಪಪ್ರಚಾರ ಮಾಡಿದವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಪ್ರಸ್ತುತ ರಾಜ್ಯದಲ್ಲಿ ಪಿಕ್ ಪಾಕೇಟ್ ಸರ್ಕಾರವಿದ್ದು, ತನ್ನ ಗ್ಯಾರಂಟಿಗಳಿಗಾಗಿ ಸಾಮಾನ್ಯರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ ಎಂದು ಟೀಕಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರವನ್ನು ಜನವಿರೋಧಿ ಸರ್ಕಾರ ಎಂದು ಟೀಕಿಸುತ್ತಿದ್ದರು. ಆದರೆ, ಇಂದು ಅವರೇ ಬೆಲೆ ಏರಿಸುವ ಮೂಲಕ ಜನವಿರೋಧಿ ಸರ್ಕಾರ ಎಂಬುದಾಗಿ ಪ್ರಚುರಪಡಿಸಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ನೂತನ ಸದಸ್ಯರಾದ ಡಾ.ಧನಂಜಯ ಸರ್ಜಿ ಮತ್ತು ಎಸ್.ಎಲ್. ಭೋಜೇಗೌಡ ಅವರನ್ನು ಸನ್ಮಾನಿಸಲಾಯಿತು. ಪರಿಷತ್ ಮಾಜಿ ಸದಸ್ಯ ದಿವಂಗತ ಭಾನುಪ್ರಕಾಶ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ. ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೆಬಾಳ್, ಶಾಂತರಾಜ್ ಪಾಟೀಲ್, ನೆಲಹೊನ್ನೆ ಮಂಜುನಾಥ್, ಜಿಪಂ ಮಾಜಿ ಸದಸ್ಯ ಸುರೇಂದ್ರನಾಯ್ಕ, ಕುಬೇರಪ್ಪ, ಮಾರುತಿ ನಾಯ್ಕ ಇತರರಿದ್ದರು.