ಹೊನ್ನಾಳಿ: ಮಳೆ ಹಾನಿಗೊಳಗಾದ ಬೆಳೆಗೆ ಪರಿಹಾರ ಕೊಡಲಿಕ್ಕೆ ಚೌಕಾಶಿ ಮಾಡುತ್ತಿದ್ದೀರಲ್ಲ, ನಿಮ್ಮ ಮನೆಯಿಂದ ದುಡ್ಡು ಕೊಡುತ್ತೀರಾ ಏನು ಎಂದು ಅಧಿಕಾರಿಗಳನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ತರಾಟೆಗೆ ತೆಗೆದುಕೊಂಡರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಸೋಮವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ತುರ್ತು ಸಭೆಯಲ್ಲಿ ಮಾತನಾಡಿದರು. ಮೊದಲು ಸರಿಯಾಗಿ ಸಮೀಕ್ಷೆ ಮಾಡಿ ಪರಿಹಾರಕ್ಕೆ ಕ್ರಮ ಕೈಗೊಳ್ಳಿ. ಕಾಟಾಚಾರಕ್ಕೆ ಸರ್ವೇ ಮಾಡಿ ಮಜ್ಜಿಗೆಗೂ ಸಾಲದಂತೆ ಕೊಡುವ ಹಣ ಉಪಯೋಗಕ್ಕೆ ಬರದು ಎಂದು ಹೇಳಿದರು.
ಹೊನ್ನಾಳಿ, ನ್ಯಾಮತಿ ತಾಲೂಕಿನಲ್ಲಿ 3071 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಹಾಳಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕಿ ಪ್ರತಿಮಾ ವರದಿ ನೀಡುತ್ತಿದ್ದಂತೆ ಮಧ್ಯ ಪ್ರವೇಶಿಸಿ ಶಾಸಕರು, ಅವಳಿ ತಾಲೂಕಿನಾದ್ಯಂತ 10 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಹಾನಿಯಾಗಿದೆ. ಸರಿಯಾಗಿ ಸಮೀಕ್ಷೆ ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಮತ್ತೆ ಸರ್ವೇ ಮಾಡಿ ವರದಿ ನೀಡಿ ಎಂದು ಸೂಚಿಸಿದರು.
ಕಳೆದ ಮೇ ತಿಂಗಳಿನಲ್ಲಿ ಬಿದ್ದ ಮಳೆಗೆ 850 ಹೆಕ್ಟೇರ್ ಭತ್ತ ಸಂಪೂರ್ಣ ಜಲಾವೃತವಾಗಿ ರೈತರಿಗೆ ತುಂಬಾ ನಷ್ಟವಾಗಿದೆ. ಹೆಚ್ಚಿನ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಮೆಕ್ಕೆಜೋಳದ ನಷ್ಟದ ಬಗ್ಗೆಯೂ ವಾಸ್ತವದ ವರದಿ ನೀಡಿ ಎಂದು ತಾಕೀತು ಮಾಡಿದರು.
ಅವಳಿ ತಾಲೂಕಿನ 26 ಕಿಮೀ ರಸ್ತೆ, 3 ಸೇತುವೆ, 8 ಕೆರೆಗಳ ದಡ, ಒಂದು ಶಾಲಾ ಕೊಠಡಿ ಸಂಪೂರ್ಣ ಹಾಳಾಗಿ 3.15 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಪಂ ಎಇಇ ಅಜ್ಜಪ್ಪ ತಿಳಿಸಿದರು. ಶಾಸಕರು ಮಾತನಾಡಿ, ನಿಮ್ಮ ಅಂದಾಜು ವೆಚ್ಚ ಸರಿಯಿಲ್ಲ. ದುರಸ್ತಿ ಕಾರ್ಯಗಳಿಗೆ ಕ್ರಿಯಾ ಯೋಜನೆಯಲ್ಲಿ ಮೀಸಲಿಟ್ಟ ಹಣ ಯಾವುದಕ್ಕೂ ಸಾಲುವುದಿಲ್ಲ. ಮತ್ತೆ ಕ್ರಿಯಾಯೋಜನೆ ತಯಾರಿಸಿ ಎಂದು ಸೂಚಿಸಿದರು.