ಜಿಲ್ಲೆ

ಸ್ವಸ್ಥ ಸಮಾಜ ನಿರ್ಮಾಣಕ್ಕೆ ನ್ಯಾಯಾಲಯಗಳ ಪ್ರಯತ್ನ

Davangere - Desk - Shobha Krishna Gowda

ಹೊನ್ನಾಳಿ: ಸ್ವಸ್ಥ ಸಮಾಜದಲ್ಲಿ ಪರಸ್ಪರ ದ್ವೇಷ ಅಸೂಯೆ ದೂರ ಮಾಡುವ ಸದುದ್ದೇಶದಿಂದ ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡುತ್ತಿವೆ ಎಂದು ಹೊನ್ನಾಳಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ್ ಹೇಳಿದರು.

ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಹಮ್ಮಿಕೊಂಡಿದ್ದ ಲೋಕ ಅದಾಲತ್ ಉದ್ಘಾಟಿಸಿ ಮಾತನಾಡಿದರು.

ನ್ಯಾಯಾಲಯಗಳಿಗೆ ಸುತ್ತಾಡುವ ಬದಲು ಸ್ಥಳೀಯ ನ್ಯಾಯಾಲಯದಲ್ಲೇ ಪ್ರಕರಣಗಳನ್ನು ರಾಜಿ ಮಾಡಿಕೊಂಡರೆ ಅಲೆದಾಟ ತಪ್ಪುತ್ತದೆ ಹಾಗೂ ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಬಹುದು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಎನ್. ಪುಣ್ಯಕೋಟಿ ಮಾತನಾಡಿ, ಹಲವು ವರ್ಷಗಳಿಂದ ಬಾಕಿ ಉಳಿದಿರುವ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯ ದೊರಕಿಸಿಕೊಡಲಾಗುವುದು. ಅಲ್ಲದೇ ಉಭಯ ಕಕ್ಷಿದಾರರಿಗೆ ರಾಜಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು ತಿಳಿಸಿದರು.

ಲೋಕ ಅದಾಲತ್‌ನಲ್ಲಿ ಪ್ರಕರಣಗಳು ಇತ್ಯರ್ಥವಾಗಬೇಕಾದರೆ ಕಕ್ಷಿದಾರರ ಎರಡು ಕಡೆ ವಕೀಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಎಪಿಪಿ ಭರತ್ ಭೀಮಯ್ಯ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಪಿ. ಜಯ ಪ್ಪ, ಸಂಘದ ಕಾರ್ಯದರ್ಶಿ ಪುರುಷೋತ್ತಮ್, ಹಿರಿಯ ವಕೀಲ ಎಸ್.ಎಸ್. ಬಳ್ಳೂರು, ಬಸವನಗೌಡ, ಶಿವಯೋಗಾರಾಧ್ಯ, ಎಸ್.ಎನ್. ಪ್ರಕಾಶ್, ಸುನಿಲ ಕುಮಾರ್ ಭೋಜನಾಯ್ಕ, ರಾಜಶೇಖರ್, ಶಾಂತವೀರಪ್ಪ, ದೊರೆಸ್ವಾಮಿ, ಮಂಜುಳಮ್ಮ, ಸುಶ್ಮಿತಾ,ರಚಿತಾ, ಚೈತ್ರಾ ಇತರರು ಇದ್ದರು.

655 ಪ್ರಕರಣಗಳು ಇತ್ಯರ್ಥ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 655 ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿದ್ದು 45.73 ಲಕ್ಷ ರೂ. ಮೊತ್ತದ ಸೆಟಲ್‌ಮೆಂಟ್ ಆಗಿದೆ ಎಂದು ಹೊನ್ನಾಳಿ ಪ್ರಧಾನ ಸಿವಿಲ್ ನ್ಯಾಯಾಧೀಶ ದೇವದಾಸ್ ತಿಳಿಸಿದರು.