ಹೊನ್ನಾಳಿ: ದೇಶದಲ್ಲಿ ಸಂಸ್ಕೃತಿ- ಪರಂಪರೆ ಶಾಶ್ವತವಾಗಿ ಉಳಿಯಲು ಗುರು ಪರಂಪರೆ ಕಾರಣ ಎಂದು ಶಿವಮೊಗ್ಗದ ಶಾಸಕ ಚನ್ನಬಸಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಸರಾ ಮತ್ತು ಶರನ್ನವರಾತ್ರಿಯ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಬನ್ನಿಯನ್ನು ಬಂಗಾರದಂತೆ ಭಾವಿಸುವ, ಪ್ರಕೃತಿ ಮತ್ತು ಸ್ತ್ರೀಯರನ್ನು ಆರಾಧಿಸುವ ನಮ್ಮ ಸಂಸ್ಕೃತಿಯು ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಸ್ವಾತಂತ್ರ್ಯಪೂರ್ವದಲ್ಲಿ ಅನೇಕ ದಾಳಿಕೋರರು ದೇಶದ ದೇವಾಲಯ ನಾಶಮಾಡಿದರು. ನಮ್ಮ ದೇಶದ ಸಂಪತ್ತು ದೋಚಿದರು. ಆದರೆ, ಅವರಿಗೆ ನಮ್ಮಲ್ಲಿನ ಭಾವನೆಗಳು, ನಂಬಿಕೆ, ವಿಶ್ವಾಸ ನಾಶ ಮಾಡಲಾಗಲಿಲ್ಲ. ಇದು ನಮ್ಮ ಹಿಂದು ಸಂಸ್ಕೃತಿಯ ವೈಶಿಷ್ಟ್ಯತೆಯಾಗಿದೆ. ನಮ್ಮ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ ಎಂದು ದೃಷ್ಟಾಂತಗಳ ಮೂಲಕ ಉದಾಹರಿಸಿದರು.
ಶಿವಮೊಗ್ಗದಲ್ಲಿ ಶಾಸಕನಾಗಿ ಕಾರ್ಯನಿರ್ವಹಿಸಲು ಶಕ್ತಿ ತೆಗೆದುಕೊಂಡು ಹೋಗಲು ಹಿರೇಕಲ್ಮಠದ ಧಾರ್ಮಿಕ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಇದೊಂದು ಪವಿತ್ರ ಧಾರ್ಮಿಕ ಶಕ್ತಿ ಕೇಂದ್ರ ಎಂದರು.
ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಶ್ರೀಮಠದಲ್ಲಿ ನ್ಯಾಯಪೀಠ ಸ್ಥಾಪಿಸಿ ತನ್ಮೂಲಕ ಭಕ್ತರ ವ್ಯಾಜ್ಯ ಬಗೆಹರಿಸಿ ಈ ಭಾಗದ ನಡೆದಾಡುವ ದೇವರಾಗಿದ್ದರು. ಶ್ರೀಮಠವು ಕಲಾವಿದರು, ಸಾಹಿತಿ, ಉಪನ್ಯಾಸಕರನ್ನು ಗುರುತಿಸಿ ಅವಕಾಶ ಕಲ್ಪಿಸುವ ಮಧ್ಯಕರ್ನಾಟಕದ ಏಕೈಕ ಮಠವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎಂ. ತಿಪ್ಪೇಶಪ್ಪ ಮಾತನಾಡಿ, ಇಂದಿನ ಸಮಾಜದಲ್ಲಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವುದು ಆತಂಕಕಾರಿ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್‌ಜೆವಿಪಿ ಬಿಇಡಿ ಕಾಲೇಜಿನ ಪ್ರಾಚಾರ್ಯರಾದ ಮಮತಾ ಮಾತನಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು. ಹಿರೇಕಲ್ಮಠದ ಡಾ. ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪುರಸಭೆಯ ಅಧ್ಯಕ್ಷ ಎ.ಕೆ. ಮೈಲಪ್ಪ, ಕಾಂಗ್ರೆಸ್ ಮುಖಂಡ ಎಚ್.ಎ. ಉಮಾಪತಿ, ಪತ್ರಕರ್ತ ಎಚ್.ಸಿ. ಮೃತ್ಯುಂಜಯ ಪಾಟೀಲ್, ಎಸ್‌ಜೆವಿಪಿ ಬಿಇಡಿ ಕಾಲೇಜಿನ ಉಪನ್ಯಾಸಕರಾದ ಎಸ್.ಎಂ. ಪ್ರಸನ್ನಕುಮಾರ್, ಡಾ. ರವೀಂದ್ರನಾಥ್, ಲೋಕೇಶ್ ಗೌಡ, ಮುಖಂಡರಾದ ವೀರೇಶ್ ಜವಳಿ, ಕತ್ತಿಗೆ ನಾಗರಾಜ್, ಶಿಕಾರಿಪುರದ ಗುರುಮೂರ್ತಿ ಇತರರಿದ್ದರು. ಶ್ರೀ ಮಂಜುನಾಥ ದೇವರು ದೇವಿಯ ಪುರಾಣ ವಾಚಿಸಿದರು.