ಹೊನ್ನಾಳಿ: ವೀರಶೈವ ಹಾಗೂ ಲಿಂಗಾಯತ ಇವೆರಡೂ ಒಂದೇ. ಆದರೆ, ಕೆಲವರು ತಮ್ಮ ಸ್ವಾರ್ಥಕ್ಕೆ ಮನಸ್ಸಿಗೆ ಬಂದಂತೆ ವ್ಯಾಖ್ಯಾನ ಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಇಂತಹ ವಿವಾದ ಹುಟ್ಟು ಹಾಕುವವರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ಹಿರೇಕಲ್ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಜಂಗಮ ವಟುಗಳಿಗೆ ಆಯೋಜಿಸಿದ್ದ ಲಿಂಗ ದೀಕ್ಷಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವೀರಶೈವ ಧರ್ಮ ಸಂಸ್ಥಾಪಕರು ನಮ್ಮ ಪಂಚಪೀಠಾಧ್ಯಕ್ಷರು. ವರ್ಷಕ್ಕೊಮ್ಮೆಯಾದರೂ ಪೀಠಗಳ ದರ್ಶನ ಮಾಡಿ ಸಿದ್ಧಾಂತ ಶಿಖಾಮಣಿ ಅಧ್ಯಯನ ಮಾಡಬೇಕು. ನಾವು ಯಾವಾಗಲೂ ಲಿಂಗ, ರುದ್ರಾಕ್ಷಿ, ಭಸ್ಮ ಹಾಗೂ ಗಂಧವನ್ನು ಧಾರಣೆ ಮಾಡಬೇಕು. ನಮ್ಮ ಕೆಟ್ಟ ಹಣೆಬರಹವನ್ನು ಭಸ್ಮ ಬದಲಾಯಿಸುತ್ತದೆ ಎಂದು ತಿಳಿಸಿದರು.
ಭಾರತ ಧಾರ್ಮಿಕತೆಯ ತೊಟ್ಟಿಲು, ಇಲ್ಲಿ ಎಲ್ಲ ಧರ್ಮವೂ ನೆಲೆ ನಿಂತಿದೆ. ಸೌಹಾರ್ದಕ್ಕೆ ಮತ್ತೊಂದು ಹೆಸರೇ ಭಾರತ. ಸಂಪತ್ಭರಿತವಾದ ರಾಷ್ಟ್ರದಲ್ಲಿ ಎಲ್ಲವೂ ಇದೆ. ಹಿಂದೆ ಋಷಿಮುನಿಗಳು ತಮ್ಮ ದಿವ್ಯ ದೃಷ್ಟಿಯಿಂದ ಎಲ್ಲವನ್ನೂ ಕಂಡುಹಿಡಿದಿದ್ದರು. ಆದನ್ನು ಗ್ರಂಥರೂಪಕ್ಕೆ ಇಳಿಸಿದ್ದರಿಂದ ಇತರ ರಾಷ್ಟ್ರಗಳು ಇದನ್ನೇ ಅಧ್ಯಯನ ಮಾಡಿ ನಾವು ಕಂಡು ಹಿಡಿದ್ದಿದ್ದೇವೆ ಎನ್ನುತ್ತಾರೆ. ಭಾರತವನ್ನು ಇತರ ರಾಷ್ಟ್ರಗಳು ಯಾವಾಗಲೂ ಗುರುಸ್ಥಾನದಲ್ಲೇ ನೋಡುತ್ತವೆ ಎಂದರು.
ನಾವು ಜಾತಿಯಿಂದ ಜಂಗಮರಾಗಬಾರದು. ಆಚಾರ, ವಿಚಾರ ಹಾಗೂ ಆಚರಿಸುವ ಸಾಂಪ್ರದಾಯಗಳಿಂದ ಜಂಗಮರಾಗಬೇಕು. ಆಗ ನಿರಂತರವಾಗಿ ಸಮಾಜ ನಮಗೆ ಮನ್ನಣೆ ನೀಡುತ್ತದೆ, ಈ ಬಗ್ಗೆ ನಾವು ಜಾಗೃತರಾಗಬೇಕು. ಆಚಾರ-ವಿಚಾರ ಅಳವಡಿಸಿಕೊಂಡು ಇತರರಿಗೆ ಆದರ್ಶವಾಗಿರಬೇಕು ಎಂದು ವಟುಗಳಿಗೆ ಕಿವಿಮಾತು ಹೇಳಿದರು.
ಲಿಂಗ ದೀಕ್ಷೆ ಪಡೆದ ಪ್ರತಿಯೊಬ್ಬ ಜಂಗಮ ವಟುಗಳಲ್ಲಿ ಸದ್ವಿಚಾರ ಹಾಗೂ ಸದಾಚಾರ ಕೇಂದ್ರೀಕೃತವಾಗಿರುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಹಾಗೂ ಸಂಸ್ಕಾರ, ಸಮಾಜ ಮತ್ತು ಕುಟುಂಬದಿಂದ ದೊರೆಯಬೇಕು ಎಂದರು.
ಈ ಸಂದರ್ಭದಲ್ಲಿ 116 ಯುವ ವಟುಗಳಿಗೆ ಹಾಗೂ 14 ಮಹಿಳೆಯರಿಗೆ ದೀಕ್ಷೆ ನೀಡಲಾಯಿತು. ದೀಕ್ಷೆಯ ನಂತರ ಎಲ್ಲ 120 ವಟುಗಳು ಪಟ್ಟಣದಲ್ಲಿ ಭಿಕ್ಷೆ ಮಾಡಿದರು.
ಹಾರನಹಳ್ಳಿ ರಾಮಲಿಂಗೇಶ್ವರ ಶ್ರೀಮಠದ ವಿಶ್ವಾರಾಧ್ಯ ಶಿವಾಚಾರ್ಯ, ಕೋಣಂದೂರು ಶ್ರೀಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ವಟುಗಳಿಗೆ ಆಶೀರ್ವಚನ ನೀಡಿದರು. ಹಿರೇಕಲ್ಮಠದ ವ್ಯವಸ್ಥಾಪಕ ಎಂಪಿಎಂ ಚನ್ನಬಸವಯ್ಯ, ಬಸವರಾಜಶಾಸ್ತ್ರಿ, ವಿದ್ಯಾಧರಶಾಸ್ತ್ರಿ, ಪುರಸಭಾ ಸದಸ್ಯ ಹೊಸಕೇರಿ ಸುರೇಶ್ ಇದ್ದರು.