ಜಿಲ್ಲೆ

ನದಿ ತೀರದಲ್ಲಿ ಬನಸ್ಪತ್ರೆ ಘಮ, ಘಮ

Davangere - Desk - Shobha Krishna Gowda

ಶ್ರೀನಿವಾಸ್ ಟಿ. ಹೊನ್ನಾಳಿ

ಬೇಸಿಗೆಯ ಸುಡುಬಿಸಿಲು ಶುರುವಾಗುತ್ತಿದ್ದಂತೆ ದೇಹಕ್ಕೆ ತಂಪು ನೀಡುವ ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಫೆಬ್ರವರಿ ಪ್ರಾರಂಭವಾಗುತ್ತಿದ್ದಂತೆ ತಾಪಮಾನ ಅಧಿಕಗೊಂಡಿದ್ದು, ಜನರನ್ನು ಬಸವಳಿಯುವಂತೆ ಮಾಡಿದೆ.

ಬೇಸಿಗೆ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಕಡೆ ಬನಸ್ಪತ್ರೆ ಹಣ್ಣು ಮಾರಾಟವಾಗುತ್ತಿದ್ದು, ಜನತೆ ಬಿಸಿಲಿನ ಬೇಗೆ ಕಡಿಮೆ ಮಾಡಿಕೊಳ್ಳಲು ಅಂಗಡಿಗಳಿಗೆ ಧಾವಿಸಿ ಹಣ್ಣುಗಳನ್ನು ಖರೀದಿಸುತಿರುವುದು ಎಲ್ಲೆಡೆ ಕಂಡು ಬರುತ್ತಿದೆ.

ತುಂಗಭದ್ರಾ ನದಿ ತೀರದ ಮರಳು ಮಣ್ಣಿನಲ್ಲಿ ತೇವಾಂಶ ಆಧರಿಸಿ ಬೆಳೆಯುವ ಬನಸ್ಪತ್ರೆ, ಗಂಜಾಂ ಹಾಗೂ ಕರಬೂಜ ಎಂಬ ದೇಸಿ ತಳಿಯ ಹಣ್ಣುಗಳಿಗೆ ಈಗ ಬಹು ಬೇಡಿಕೆ.

ಕೇವಲ ಮೂರು ತಿಂಗಳ ಅವಧಿಯಲ್ಲಿ ಮಾತ್ರ ಈ ಹಣ್ಣು ಬೆಳೆಯುತ್ತಾರೆ. ಬೆಳೆದ 15 ದಿನಗಳ ಒಳಗೆ ಮಾತ್ರ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು.

ಹೊನ್ನಾಳಿ ನದಿ ತೀರದಲ್ಲಷ್ಟೆ ಅಲ್ಲದೆ ಮಹಾರಾಷ್ಟ್ರದ ಔರಂಗಾಬಾದ್, ನಾಗಪುರ ಪ್ರದೇಶದಲ್ಲೂ ಈ ಹಣ್ಣುಗಳನ್ನು ಬೆಳೆಯುತ್ತಾರೆ.ಆದರೆ ಹೊನ್ನಾಳಿಯಲ್ಲಿ ಬೆಳೆಯುವ ಹಣ್ಣುಗಳು ಸ್ವಲ್ಪ ಸಿಹಿ ಹೊಂದಿರುತ್ತವೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ತುಂಬಾ ತೆಳುವಾದ ಸಿಪ್ಪೆ, ದಪ್ಪನೆಯ ತಿರುಳು ಈ ಹಣ್ಣುಗಳು ಸುಮಧುರ ಪರಿಮಳ ಹೊಂದಿರುತ್ತವೆ. ಬನಸ್ಪತ್ರೆ ಹಣ್ಣುಗಳು ಸೀಕರಣೆ ಹಾಗೂ ಜ್ಯೂಸ್​ಗೆ ಪ್ರಸಿದ್ಧ. ಮಧುಮೇಹ ಇರುವವರು ಹಾಗೂ ಬಾಣಂತಿಯರು ಸೇರಿ ಎಲ್ಲರೂ ಉಪಹೋಗಿಸಬಹುದು. ಅದರಲ್ಲೂ ಬೇಸಿಗೆಯಲ್ಲಿ ಮಾತ್ರ ಈ ಹಣ್ಣು ಎಲ್ಲರಿಗೂ ರಾಮಬಾಣ ಎನ್ನುತ್ತಾರೆ ರೈತರು.

ದಿವೊಂದಕ್ಕೆ ಸಗಟು ದರದಂತೆ 8ರಿಂದ 10 ಲಕ್ಷ ರೂ.ವರೆಗೆ ಮಾರುಕಟ್ಟೆ ಹೊಂದಿರುವ ಈ ಹಣ್ಣುಗಳ ಮಾರಾಟದಿಂದ ಹೆಚ್ಚು ಕಡಿಮೆ ಒಂದು ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುತ್ತಾರೆ ಇಲ್ಲಿನ ರೈತರು.

ತಾಲೂಕಿನ ತುಂಗಭದ್ರಾ ನದಿ ನೀರು ಹರಿಯುವ ಪ್ರದೇಶ ಹಾಗೂ ಇಬ್ಬನಿ ಮತ್ತು ಶೀತ ಗುಣ ಹೊಂದಿರುವ ಪ್ರದೇಶ ಸೇರಿ ಹೊಳೆಮಾದಾಪುರ, ದೇವನಾಯಕನಹಳ್ಳಿ, ಬೇಲಿಮಲ್ಲೂರು ಹಾಗೂ ಹರಳಹಳ್ಳಿ ಸೇರಿ ಇತರ ಕಡೆಗಳಲ್ಲಿ ಬನಸ್ಪತ್ರೆ ಹಾಗೂ ಕರಬೂಜ ಹಣ್ಣು ಬೆಳೆಯುತ್ತಾರೆ.

ಕೇವಲ ಮೂರು ತಿಂಗಳಿಗೆ ಈ ಬೆಳೆ ಫಲಕ್ಕೆ ಬರುತ್ತದೆ, ಹಣ್ಣಿನ ಗಾತ್ರದ ಮೇಲೆ ದರ ನಿಗದಿಯಾಗುತ್ತದೆ ಎನ್ನುತ್ತಾರೆ ರೈತ ಮಾರುತಿ.

ಪ್ರತಿದಿನ ಬೆಳಗಿನ 4 ಗಂಟೆಗೆ ಭದ್ರಾವತಿ ಕಡೂರು, ಬೀರೂರು, ತರೀಕೆರೆ, ಶಿವಮೊಗ್ಗ, ಶಿರಾಳಕೊಪ್ಪ, ಚಿತ್ರದುರ್ಗ, ಹಾವೇರಿ, ಬಂಕಾಪುರ, ರಾಣೆಬೆನ್ನೂರಿನಿಂದ ಬರುವ ವ್ಯಾಪಾರಸ್ಥರು ಬೆಳಗ್ಗೆ 9 ರ ಒಳಗೆ ವಹಿವಾಟು ಮುಗಿಸಿ ಹಣ್ಣುಗಳನ್ನು ಕೊಂಡೊಯ್ಯುತ್ತಾರೆ.

ಒಂದು ಕೆಜಿ ಬನಸ್ಪತ್ರೆ ಹಣ್ಣಿಗೆ 45ರಿಂದ 60ರೂ., ಕರಬೂಜ 35 ರಿಂದ 40, ಕಲ್ಲಂಗಡಿ 30 ರಿಂದ 40ರೂ. ಹಾಗೂ ದೊಡ್ಡ ಗಾತ್ರದ ಹಣ್ಣು 280 ರಿಂದ 350 ರೂ.ಗೆ ಕೊಂಡುಕೊಳ್ಳುತ್ತಾರೆ. ಪ್ರತಿದಿನ ಹೊನ್ನಾಳಿ ನಗರದ 11 ಅಂಗಡಿಗಳಲ್ಲಿ ಹಣ್ಣಿನ ವ್ಯಾಪಾರ 8 ರಿಂದ 10 ಲಕ್ಷ ಎನ್ನುತ್ತಾರೆ ವ್ಯಾಪಾರಸ್ಥರು.

ಎಲ್ಲ ಹಣ್ಣುಗಳಂತೆ ಬನಸ್ಪತ್ರೆ ಹಣ್ಣುಗಳಿಗೂ ರೋಗಬಾಧೆ ಇರುತ್ತದೆ. ಕೊಳೆರೋಗ, ಖಡಕ್ ರೋಗ, ಬುಟ್ರಿರೋಗ ಬಂದು ಬೆಳೆ ನಾಶ ಆಗಬಹುದು. ಆದರೆ ಸಕಾಲಕ್ಕೆ ಔಷಧ ಸಿಂಪಡಿಸಿದರೆ ರೈತರು ಹಾಗೂ ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಸಿಗುತ್ತದೆ. ಅಲ್ಲದೆ ಪ್ರತಿ ವರ್ಷಕ್ಕಿಂತ ಈ ಬಾರಿ ಹಣ್ಣಿನ ದರ ಹೆಚ್ಚಾಗಿರುವುದರಿಂದ ಕೇಳಿ ಹಾಗೆಯೇ ಹೋಗುವವರ ಸಂಖ್ಯೆ ಹೆಚ್ಚಾಗಿದೆ. - ಸಾದ್ವಿಕ್ ಖಾನ್ ಹಣ್ಣಿನ ವ್ಯಾಪಾರಿ ಹೊನ್ನಾಳಿ.