ಹೊನ್ನಾಳಿ: ಕಿತ್ತೂರು ರಾಣಿ ಚನ್ನಮ್ಮ ಒಬ್ಬ ಅಪ್ರತಿಮ ಸಾಹಸಿ, ಉತ್ತಮ ಆಡಳಿತಗಾರ್ತಿ ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಬೆನಕನಹಳ್ಳಿ ಅಭಿಪ್ರಾಯಪಟ್ಟರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ರಾಣಿ ಚನ್ನಮ್ಮ ಕಿತ್ತೂರು ಸಂಸ್ಥಾನ ಕಾಪಾಡಿಕೊಳ್ಳಲು ಬ್ರಿಟಿಷರ ವಿರುದ್ಧ ತೋರಿದ ಧೈರ್ಯ, ಸಾಹಸ, ಎದೆಗಾರಿಕೆ ವರ್ಣಿಸಲು ಸಾಧ್ಯವಿಲ್ಲ ಎಂದು ಬಣ್ಣಿಸಿದರು.
ರಾಜ್ಯ ಪಂಚಮಸಾಲಿ ಸಮಾಜವು ಕಿತ್ತೂರು ರಾಣಿ ಚನ್ನಮ್ಮನ ಜಯಂತ್ಯುತ್ಸವ ಬದಲು ವಿಜಯೋತ್ಸವ ಆಚರಿಸುವಂತೆ ತಿಳಿಸಿದ್ದು, ಅದೇ ರೀತಿ ನಾವೆಲ್ಲರೂ ಮುಂದುವರಿಯೋಣ ಎಂದರು.
ಕಿತ್ತೂರು ಚನ್ಮಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಯಿ ಮಗನಂತಿದ್ದರು. ಅವರಿಬ್ಬರು ಐತಿಹಾಸಿಕವಾಗಿ ಮಹನೀಯರು. ಕೇಂದ್ರ ಸರ್ಕಾರ ಕಿತ್ತೂರು ರಾಣಿ ಚನ್ನಮ್ಮನ ಸವಿನೆನಪಿಗಾಗಿ ಅಂಚೆ ಚೀಟಿ ಬಿಡುಗಡೆ ಮಾಡಿರುವುದು ಸಂತೋಷ ತಂದಿದೆ ಎಂದರು.
ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಟ್ಟಣಶೆಟ್ಟಿ ಪರಮೇಶ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಅವರಿಗೆ ಸೋಲಿನ ರುಚಿ ತೋರಿಸಿದ್ದು ವೀರರಾಣಿ ಚನ್ನಮ್ಮ. ನಮಗೆ ಸಿನಿಮಾ ನಟರ ಬದಲು ಇಂಥ ಧೀರ ಮಹಿಳೆಯರು ಅನುಕರಣೆಗೆ ಆದರ್ಶನೀಯ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಅಭಿಷೇಕ್, ಹಿರೇಮಠದ ರೈತಮುಖಂಡ ಬಸವರಾಜಪ್ಪ ಹಾಗೂ ಪತ್ರಕರ್ತ ಗಿರೀಶ್ ನಾಡಿಗ್ ಮಾತನಾಡಿದರು.
ತಹಸೀಲ್ದಾರ್ ಪಟ್ಟರಾಜಗೌಡ, ತಾಲೂಕು ಯುವಘಟಕದ ಅಧ್ಯಕ್ಷ ಹಾಲೇಶ್, ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ ರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರಗೌಡ, ರೈತಸಂಘದ ಅಧ್ಯಕ್ಷ ಕೆ.ಸಿ. ಬಸವರಾಜಪ್ಪ ಉಪಸ್ಥಿತರಿದ್ದರು.