ಜಿಲ್ಲೆ

ಮೋದಿ ಸಾಧನೆಯಿಂದ ಭಾರತದತ್ತ ವಿಶ್ವದ ಚಿತ್ತ

ಹೊನ್ನಾಳಿ: ಪ್ರಧಾನಿ ನರೇಂದ್ರ ಮೋದಿ ಒಂಬತ್ತು ವರ್ಷಗಳಲ್ಲಿ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದು, ಇದರಿಂದ ವಿಶ್ವವೇ ದೇಶದತ್ತ ತಿರುಗಿ ನೋಡುವಂತಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗದ್ದುಗೇಶ್ವರ ಸ್ವಾಮಿ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಒಂಬತ್ತು ವರ್ಷ ಪೂರೈಸಿದ ಕೇಂದ್ರ ಸರ್ಕಾರ ಮಾಡಿದ ಸಾಧನೆ, ಸಾವಿರಾರು ಕಿ.ಮೀ. ರಸ್ತೆ ಅಭಿವೃದ್ಧಿ ಎಲ್ಲವೂ ರಾಷ್ಟ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ. ಇದರಿಂದಾಗಿ ಭಾರತ ಆರ್ಥಿಕತೆಯಲ್ಲಿ ಹತ್ತನೇ ಸ್ಥಾನದಲ್ಲಿದ್ದು, ಕೆಲವೇ ವರ್ಷಗಳಲ್ಲಿ ಮೂರನೇ ಸ್ಥಾನಕ್ಕೆ ಬರಲಿದೆ ಎಂದರು.

ರಾಮಮಂದಿರ ನಿರ್ಮಾಣ, 370ನೇ ವಿಧಿ ಮತ್ತಿತರ ಸೂಕ್ಷ್ಮ ಸಮಸ್ಯೆಗಳು ಪರಿಹಾರ ಕಂಡಿವೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ನರೇಂದ್ರ ಮೋದಿ, ಭಾರತೀಯ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದರು ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ರಾಷ್ಟ್ರದ ಹಿತದೃಷ್ಟಿಯಿಂದ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು. ಆ ನಿಟ್ಟಿನಲ್ಲಿ ನಾವು ಶ್ರಮಿಸಬೇಕಿದ್ದು, ಕೇಂದ್ರದ ಸಾಧನೆಗಳ ವಿವರವನ್ನು ಪ್ರತಿ ಮನೆಗೂ ತಲುಪಿಸಬೇಕು ಎಂದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ತರಗನಹಳ್ಳಿ ರಮೇಶ್, ಮುಖಂಡರಾದ ಜಗದೀಶ್, ಉದಯಕುಮಾರ್, ಚಂದ್ರಪ್ಪ, ವರದರಾಜ್, ರುದ್ರೇಶ್ ಇತರರಿದ್ದರು.