ಜಿಲ್ಲೆ

ವರ್ಷದೊಳಗೆ ಸೂರಗೊಂಡನಕೊಪ್ಪಕ್ಕೆ ರೈಲು ಮಾರ್ಗ

Davangere - Desk - Basavaraja P

ಶಾಸಕ ಡಿ.ಜಿ.ಶಾಂತನಗೌಡ ಹೇಳಿಕೆ I ಹೊನ್ನಾಳಿಯಲ್ಲಿ ಗಣ್ಯರಿಗೆ ಸನ್ಮಾನ ಸಮಾರಂಭ

ಹೊನ್ನಾಳಿ: ಸೇವಾಲಾಲರ ಜನ್ಮಸ್ಥಳ ಸೂರಗೊಂಡನಕೊಪ್ಪ ಮಾರ್ಗವಾಗಿ ಇನ್ನೊಂದು ವರ್ಷದೊಳಗೆ ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.

ತಾಲೂಕು ಬಂಜಾರ ಸಂಘದಿಂದ ಗುರುಭವನದಲ್ಲಿ ಭಾನುವಾರ ಗಣ್ಯರಿಗೆ ಸನ್ಮಾನ, ಬೇಡಿಕೆಗಳ ಮನವಿ ಪತ್ರ ಸಲ್ಲಿಕೆ ಸಮಾರಂಭದಲ್ಲಿ ಮಾತನಾಡಿದರು.

ರೈಲು ಮಾರ್ಗ ನಿರ್ಮಾಣದಿಂದ ಇಲ್ಲಿಗೆ ಬರುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಈ ಕ್ಷೇತ್ರ ಕೂಡ ವಿಶ್ವ ಪ್ರಸಿದ್ಧಿಯಾಗಲಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.

ರಾಜಕಾರಣಿಗಳು, ಅಧಿಕಾರಿಗಳಿಗೆ ಹೊಗಳಿಕೆ, ತೆಗಳಿಕೆ ಸಹಜ. ಎರಡನ್ನೂ ಸ್ವೀಕರಿಸಿ ಸರಿದಾರಿಯಲ್ಲಿ ನಡೆಯಬೇಕು. ಕಾನೂನಿನಡಿ ಸೇವೆ ಸಲ್ಲಿಸಿ ಅರ್ಹರಿಗೆ ನ್ಯಾಯ ಒದಗಿಸಬೇಕು ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಬಂಜಾರ ಸಮಾಜವು ಸರ್ಕಾರದ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ, ಆರ್ಥಿಕ ಪ್ರಗತಿ ಸಾಧಿಸಲು ಸಲಹೆ ನೀಡಿದರು. ಸಮುದಾಯ ವಿಭಿನ್ನ ಸಂಸ್ಕೃತಿ ಹೊಂದಿದ್ದು ಅದನ್ನು ಉಳಿಸಿಕೊಂಡು ಹೋಗಲು ತಿಳಿಸಿದರು.

ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದರೆ ಸಮಾಜ ತಾನೇ ತಾನಾಗಿ ಮುಖ್ಯವಾಹಿನಿಗೆ ಬರುತ್ತದೆ ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಚ್.ಎಸ್.ಭೋಜ್ಯನಾಯ್ಕ ಹೇಳಿದರು.

ವಿದ್ಯಾರ್ಥಿಗಳು ಕೂಡ ದುಶ್ಚಟಗಳಿಗೆ ದಾಸರಾಗದೆ, ಶಿಕ್ಷಣ ಪಡೆದು ಸಮಾಜ ಮತ್ತು ದೇಶಕ್ಕೆ ಮಾದರಿಯಾಗಬೇಕು ಎಂದರು.

ತಾಲೂಕು ಬಂಜಾರ ಸಂಘದ ಅಧ್ಯಕ್ಷ ಅಂಜುನಾಯ್ಕ ಮಾತನಾಡಿ, ಸೂರಗೊಂಡನಕೊಪ್ಪದಲ್ಲಿ ಮಾಲಾಧಾರಿಗಳಿಗೆ ವಿಶ್ರಾಂತಿ ಧಾಮ ನಿರ್ಮಿಸಲು ನಿವೇಶನ ಮಂಜೂರಿಗೆ ಮನವಿ ಮಾಡಿದರು.

ಕೆಪಿಎಸ್‌ಸಿ ಆಯೋಗದ ಸದಸ್ಯ ಎಚ್.ಎಸ್. ಭೋಜ್ಯನಾಯ್ಕ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್. ಜಯದೇವನಾಯ್ಕ, ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಅವರನ್ನು ಸನ್ಮಾನಿಸಲಾಯಿತು.

ಜಿಪಂ ಮಾಜಿ ಸದಸ್ಯ ಸುರೇಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿಶ್ವ ನಟೇಶ್, ನ್ಯಾಮತಿ ತಾಲೂಕು ಬಂಜಾರ ಸಂಘದ ಅಧ್ಯಕ್ಷ ಭೋಜ್ಯನಾಯ್ಕ, ಸರಿಗಮಪ ಗಾಯಕ ರಮೇಶ್ ಲಮಾಣಿ, ರಾಜು ಬಂಡ್ರಿ ಇತರರಿದ್ದರು.

ತಾಂಡ ಅಭಿವೃದ್ಧಿ ನಿಮಗದ ಮಾಜಿ ನಿರ್ದೇಶಕ ಮಾರುತಿನಾಯ್ಕ, ತಾಲೂಕು ಸಂಘದ ಕಾರ್ಯ ದರ್ಶಿ ಮಂಜಾನಾಯ್ಕ, ಭೂ ನ್ಯಾಯಮಂಡಳಿ ಸದಸ್ಯ ಪ್ರಭುದೇವನಾಯ್ಕ, ಕುಬೇರನಾಯ್ಕ ಕಾರ್ಯ ಕ್ರಮ ನಡೆಸಿಕೊಟ್ಟರು.