ಮಂಡ್ಯ: ಮೈಸೂರಿನಲ್ಲಿ ನಡೆದಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಹಿಳೆ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದು ಸ್ಥಳದಲ್ಲಿ ಸಿಕ್ಕ ಚಿನ್ನದ ಬಳೆ, ನಗದು ಇದ್ದ ಪರ್ಸ್ ಅನ್ನು ಆಟೋ ಚಾಲಕ ಆ ಮಹಿಳೆಯ ಕುಟುಂಬದವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅಂತೆಯೇ ಆಟೋ ಚಾಲಕನಿಗೆ ನಿವೃತ್ತ ತಹಸೀಲ್ದಾರ್ ಸ್ವಾಮಿಗೌಡ ಅವರು 5 ಸಾವಿರ ರೂ ನೆರವು ನೀಡಿದ್ದಾರೆ.
ಮಂಡ್ಯ ತಾಲೂಕು ಹೊನಗಾನಹಳ್ಳಿಯ ವೈ.ಆರ್.ಗೀತಾ ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆ. ಮೈಸೂರಿನ ಎಚ್‌ಪಿಒ ಮತ್ತು ಆರ್‌ಎಂಎಸ್ ಲೇಔಟ್‌ನ ನಿವಾಸಿ ಲೋಕೇಶ್‌ಕುಮಾರ್ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ. ಸ್ವಾಮಿಗೌಡ ಅವರ ಪುತ್ರಿ ಪ್ರಕೃತಿ ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ನೋಡಲೆಂದು ಜು.9ರಂದು ಮಣಿಪಾಲ್ ಆಸ್ಪತ್ರೆಗೆ ಬಂದಿದ್ದ ವೈ.ಆರ್.ಗೀತಾ ಅವರು ಮೈಸೂರಿನ ವಸಂತ ನಗರದಲ್ಲಿರುವ ತಮ್ಮ ಮನೆಗೆ ತೆರಳುತ್ತಿದ್ದಾಗ ಸಂಜೆ 5.30ರ ಸಮಯದಲ್ಲಿ ರಿಂಗ್ ರಸ್ತೆಯ ವಿಟಿಯು ಕಾಲೇಜು ಬಳಿ ಆಕಸ್ಮಿಕವಾಗಿ ಪೊಲೀಸ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾರೆ. ಇದರಿಂದ ತಲೆಗೆ ತೀವ್ರ ಪೆಟ್ಟಾಗಿತ್ತು. ಈ ಸಮಯದಲ್ಲಿ ಚಿನ್ನದ ಬಳೆ ಹಾಗೂ ಹಣವಿದ್ದ ಪರ್ಸ್ ಕೆಳಗೆ ಬಿದ್ದಿದ್ದ ಬ್ಯಾರಿಕೇಡ್‌ನೊಳಗೆ ಸೇರಿಕೊಂಡಿತ್ತು.
ಇತ್ತೀಚೆಗೆ ಬಿದ್ದಿದ್ದ ಬ್ಯಾರಿಕೇಡ್‌ಗಳನ್ನು ಎತ್ತಿ ನಿಲ್ಲಿಸುವ ಸಮಯದಲ್ಲಿ ಲೋಕೇಶ್‌ಕುಮಾರ್ ಚಿನ್ನದ ಬಳೆ ಹಾಗೂ ಪರ್ಸ್ ಸಿಕ್ಕಿದೆ. ಅದರೊಳಗಿದ್ದ ವಿಳಾಸವನ್ನು ಪತ್ತೆ ಮಾಡಿದಾಗ ಮಹಿಳೆಯ ಕುಟುಂಬದವರ ಸಂಪರ್ಕ ದೊರಕಿದೆ. ಈ ನಡುವೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗೀತಾ ಮಿದುಳು ನಿಷ್ಕ್ರಿಯಗೊಂಡು ಆ.11ರಂದು ಸಾವನ್ನಪ್ಪಿದ್ದಾರೆ. ಅವರ ಅಂತ್ಯಕ್ರಿಯೆ ಹೊನಗಾನಹಳ್ಳಿ ಗ್ರಾಮದಲ್ಲಿ ನೆರವೇರಿತ್ತು. ಅಂತೆಯೇ ಶನಿವಾರ ಮಂಡ್ಯ ವಿ.ವಿ ನಗರದಲ್ಲಿರುವ ಸ್ವಾಮಿಗೌಡರ ನಿವಾಸಕ್ಕೆ ಲೋಕೇಶ್‌ಕುಮಾರ್ ಬಂದು 40 ಗ್ರಾಂ ತೂಕದ ಚಿನ್ನದ ಬಳೆಗಳು, 2 ಸಾವಿರ ರೂ ನಗದನ್ನು ನೀಡಿದ್ದಾರೆ. ಈ ವೇಳೆ ಗೀತಾ ಅವರ ಪತಿ ವೈ.ಎಸ್.ರಾಜಣ್ಣ, ಪುತ್ರ ದೃಶ್ಯಂತ್‌ಗೌಡ, ಮಗಳು ಐಶ್ವರ್ಯಾ, ಎಲೆಚಾಕನಹಳ್ಳಿ ಗ್ರಾಮದ ಮುಖಂಡ ಅಶೋಕ್ ಪಟೇಲ್, ತಾಪಂ ಮಾಜಿ ಅಧ್ಯಕ್ಷೆ ಹೇಮಲತಾ ಬಸವರಾಜು ಇದ್ದರು.