ಬಳ್ಳಾರಿ : ಸಾರ್ವಜನಿಕ ಸೇವೆಯಲ್ಲಿದ್ದವರಿಗೆ ನಿಷ್ಠೆ ಮತ್ತು ಪ್ರಾಮಾಣಿಕತೆ ಎರಡು ಕಣ್ಣುಗಳಿದಂತೆ ಎಂದು ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಚೇಳ್ಳಗುರ್ಕಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ವತಿಯಿಂದ ಜಗಜ್ಯೋತಿ ಬಸವಣ್ಣನವರ ಜಯಂತಿಯ ಮಾಸಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ವೈದ್ಯರು ಎರಡನೇ ದೇವರು. ದಾದಿಯರು ರೋಗಿಗಳ ತಾಯಂದಿರು ಇದ್ದಂತೆ. ನಿಮ್ಮ ಸೇವೆ ಸದಾ ಸ್ಮರಣೀಯವಾದುದು ಎಂದರು.
ಆರೋಗ್ಯ ಕೇಂದ್ರದಲ್ಲಿ ಸೇವೆ ಮಾಡುವವರು ಪ್ರಾಮಾಣಿಕವಾಗಿ ಇದ್ದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗಿ, ರೋಗಿಗಳ ಸಂಖ್ಯೆ ಕಡಿಮೆಯಾಗಿರುತ್ತದೆ. ರೋಗಮುಕ್ತ ಸಮಾಜವಾಗುತ್ತದೆ. ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ, ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಸೇವೆ ಮಾದರಿಯಾಗಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಡಾ.ಕಾವ್ಯಶ್ರೀ ಮಾತನಾಡಿ ನಮ್ಮ ಪ್ರಾಮಾಣಿಕ ಸೇವೆಯನ್ನು ಸಮಾಜ, ಸಂಘ, ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದು ನಮ್ಮ ಸಂಸ್ಕೃತಿಗೆ ಹಿಡಿದ ಕೈಗನ್ನಡಿ ಆಗಿದೆ. ಜೊತೆಗೆ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ನೀಡಿದಂತಾಗಿದೆ ಎಂದು ಹೇಳಿದರು.