ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದ ಪುನರ್ವಸತಿ ಶಿಬಿರದಲ್ಲಿ ಶಿವದೀಕ್ಷಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀ ನರಸಿಂಹ ಮಠದ ಪೀಠಾಧಿಪತಿ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ, ಶ್ರೀ ರಾಜೇಶನಾಥ್ ಸ್ವಾಮೀಜಿ, ಡಾ.ಬಿ.ಎಸ್.ರವಿಶಂಕರ್, ಮನು ಕಾವೇರಪ್ಪ, ತಾಲೂಕು ಅಧ್ಯಕ್ಷ ಸಿದ್ದಣ್ಣ ಇತರರು ಇದ್ದರು. 
ಜಿಲ್ಲೆ

ಜೀವನದಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ

ಕುಶಾಲನಗರ: ಜೀವನದಲ್ಲಿ ಪ್ರಾಮಾಣಿಕ ಪ್ರಯತ್ನ, ಉತ್ತಮ ಚಿಂತನೆ, ಭಗವಂತನಲ್ಲಿನ ನಂಬಿಕೆ ಹೊಂದಿದಲ್ಲಿ ಹೆಚ್ಚಿನ ಶಾಂತಿ, ಸುಖ, ನೆಮ್ಮದಿ ಪ್ರಾಪ್ತಿಯಾಗಲಿದೆ ಎಂದು ಶೃಂಗೇರಿ ಸಮೀಪದ ಹರಿಹರಪುರದ ಶ್ರೀ ಆದಿಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಮಠದ ಪೀಠಾಧಿಪತಿ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಜಿ ತಿಳಿಸಿದರು.


ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದ ಪುನರ್ವಸತಿ ಶಿಬಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಮನಶುದ್ಧಿ ಭಗವಂತನ ನಿರಂತರ ಆರಾಧನೆಯಿಂದ ಮಾತ್ರ ಸಾಧ್ಯ. ಸುಖ-ದುಃಖಗಳಿಗೆ ಮೂಲವಾದ ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಮುಖ್ಯ. ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ಪ್ರಯತ್ನಿಸಬೇಕು. ಜೀವನ ಸುಭಿಕ್ಷವಾಗಲು, ಶಿವನ ಅನುಗ್ರಹ ಪಡೆದುಕೊಳ್ಳಲು ಶಿವದೀಕ್ಷೆ ಅನುಕೂಲವಾಗಲಿದೆ ಎಂದರು.

ಸಿದ್ದಲಿಂಗಪುರದ ಮಂಜುನಾಥಸ್ವಾಮಿ ದೇವಾಲಯದ ಶ್ರೀ ರಾಜೇಶನಾಥ್ ಸ್ವಾಮೀಜಿ ಮಾತನಾಡಿ, ಧರ್ಮಾತೀತ ಭಾವನೆಯಿಂದ ಬಾಳಬೇಕೆಂಬುದು ಹಿಂದು ಧರ್ಮದ ಸಂಘಟಕರು, ವನವಾಸಿ ಕಲ್ಯಾಣ ವೇದಿಕೆಯ ಸುದುದ್ದೇಶ. ಶಾಂತಿಯಿಂದ ಬದುಕು ಕಟ್ಟಿಕೊಳ್ಳಲು, ದೇಶ ಸಂರಕ್ಷಣೆಗೆ ನಮ್ಮ ಧರ್ಮ ಆಚಾರ, ವಿಚಾರಗಳನ್ನು ಪಾಲಿಸಿ, ಹಿರಿಯರು ಹಾಕಿಕೊಟ್ಟ ತಳಹದಿ ಮೇಲೆ ನಡೆದು ಭಾರತ ಹಾಗೂ ಧರ್ಮ ಕಟ್ಟುವ ಕೆಲಸ ಆಗಬೇಕಿದೆ. ಎಲ್ಲರೂ ಭಾರತಾಂಬೆ ಮಕ್ಕಳಾಗಿ ಬಾಳುವಂತಾಗಬೇಕು ಎಂದರು.

ಹರಿಹರಪುರ ಮಠದ ಆಡಳಿತಾಧಿಕಾರಿ ಡಾ.ಬಿ.ಎಸ್.ರವಿಶಂಕರ್, ತಾಲೂಕು ವನವಾಸಿ ಕಲ್ಯಾಣ ವೇದಿಕೆ ರಾಜ್ಯಾಧ್ಯಕ್ಷ ಮನು ಕಾವೇರಪ್ಪ, ತಾಲೂಕು ಅಧ್ಯಕ್ಷ ಸಿದ್ದಣ್ಣ, ತಾಲೂಕು ಕಾರ್ಯದರ್ಶಿ ಎಂ.ಬಿ.ಹರ್ಷ, ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್, ಉದ್ಯಮಿ ಬಿ.ಆರ್.ಜನಾರ್ಧನ ವಶಿಷ್ಠ, ಕುಶಾಲನಗರ ಅರ್ಚಕರ ಸಂಘದ ಪ್ರಮುಖ ಆರ್.ಕೆ.ನಾಗೇಂದ್ರ, ಧರ್ಮ ಜಾಗರಣಾ ವೇದಿಕೆಯ ಭರತ್ ಮಾಚಯ್ಯ, ಕೂಡಿಗೆ ಗ್ರಾಪಂ ಅಧ್ಯಕ್ಷ ಗಿರೀಶ್, ಹಿಂದುಪರ ಸಂಘಟನೆ ಪ್ರಮುಖರಾದ ಅಮೃತ್ ರಾಜ್, ಮಹೇಶ್ ಅಮೀನ್, ಶಿಬಿರದ ಹಿರಿಯರಾದ ಭೋಜ ಮತ್ತಿತರರು ಇದ್ದರು.