ರೈತ 
ಜಿಲ್ಲೆ

ಹೊನವಾಡ ರೈತರಿಗೆ ಸನ್ಮಾನ

ಗಿರೀಶ ಸಗರ

ವಿಜಯಪುರ:  ರೈತರ ಪಹಣಿಯಲ್ಲಿ ವಕ್ಫ್​ ಪದ ನಮೂದಿಸಿದ ವಿಷಯವನ್ನು ಮೊಟ್ಟಮೊದಲು ದೇಶದಲ್ಲೇ ಬಹಿರಂಗಗೊಳಿಸಿದ ಹೊನವಾಡ ರೈತರನ್ನು ಬಿಜೆಪಿ ಜಿಲ್ಲಾ ಟಕದ ವತಿಯಿಂದ ಸನ್ಮಾನಿಸಲಾಯಿತು.

ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಸಾವಯವ ಬೀಜ ನಿಗಮದ ಮಾಜಿ ಅಧ್ಯ ವಿಜುಗೌಡ ಪಾಟೀಲ, ಮುಖಂಡರಾದ ಡಾ. ಸುರೇಶ ಬಿರಾದಾರ ಮತ್ತಿತರರು ರೈತರಿಗೆ ಶಾಲು ಹೊದಿಸಿ, ಸಿಹಿ ತಿನಿಸಿ ಸನ್ಮಾನಿಸಿದರು. ಕೇಂದ್ರ ಸರ್ಕಾರ ವಕ್ಫ್​ ಕಾಯ್ದೆಗೆ ತಿದ್ದುಪಡಿ ತಂದ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರ ಭಾವಚಿತ್ರದ ಕಟೌಟ್​ ಪ್ರದರ್ಶಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ ಮಾತನಾಡಿ, ವಕ್ಫ್​ ಕಾಯ್ದೆ ತಿದ್ದುಪಡಿಗೆ ಹೊನವಾಡ ರೈತರು ಮುನ್ನುಡಿ ಬರೆದಿದ್ದಾರೆ. ಮೊದಲಿಗೆ ಹೊನವಾಡ ರೈತರು ವಕ್ಫ್​ ವಿರುದ್ಧ ಧ್ವನಿ ಎತ್ತಿದರು. ವಕ್ಫ್​ನಿಂದ ತಮ್ಮಲ್ಲಿ ಮೂಡಿರುವ ಆತಂಕ ನಿವಾರಣೆ ಮಾಡುವಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿದ ರೈತ ತಂಡವನ್ನು ಸನ್ಮಾನಿಸುತ್ತಿರುವುದು ಸಂತಸದ ವಿಷಯ ಎಂದರು.

ಬಡವರ, ಮಠ ಮಾನ್ಯಗಳ ಜಮೀನನ್ನು ವಕ್ಫ್​ ಹೆಸರಿನಲ್ಲಿ ಕಸಿದುಕೊಳ್ಳುವ ಕೆಟ್ಟ ಕಾರ್ಯ ಕಾಂಗ್ರೆಸ್​ ಸರ್ಕಾರ ಅವಧಿಯಲ್ಲಿ ನಡೆದಿತ್ತು. ಈ ಬಗ್ಗೆ ಕಾಂಗ್ರೆಸ್​ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ತೋರಲಿಲ್ಲ. ಆದರೆ ಹೊನವಾಡ ರೈತರ ಅವಿರತ ಹೋರಾಟದಿಂದ ಸದ್ಯ ವಕ್ಫ್​ ಕಾಯ್ದೆಗೆ ತಿದ್ದುಪಡಿಯಾಗಿದೆ.

ಕೇಂದ್ರ ಸಚಿವ ಅಮಿತ್​ ಷಾ ಸಹ ಹೊನವಾಡ ಗ್ರಾಮದ ರೈತರ ಹೋರಾಟ ಉಲ್ಲೆಖಿಸಿದ್ದು ಹೆಮ್ಮೆಯ ಸಂಗತಿ. ಕಾಂಗ್ರೆಸ್​ ನೀತಿಯಿಂದ ರೈತರು ಅನುಭವಿಸುತ್ತಿದ್ದ ತೊಂದರೆಗೆ ಕೇಂದ್ರ ಸರ್ಕಾರ ಇತಿಶ್ರೀ ಹಾಡಿದೆ ಎಂದರು.

ರಾಜ್ಯ ಸಾವಯವ ಬೀಜ ಪ್ರಮಾಣನ ಸಂಸ್ಥೆ ಮಾಜಿ ಅಧ್ಯ ವಿಜುಗೌಡ ಪಾಟೀಲ ಮಾತನಾಡಿ, ವಕ್ಫ್​ ವಿರುದ್ಧ ಹೋರಾಟ ಆರಂಭವಾಗಿದ್ದೇ ಹೊನವಾಡ ಗ್ರಾಮದಿಂದ. ಇಲ್ಲಿನ ರೈತರು ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿಯಾಗಿ ವಿಷಯ ಮನವರಿಕೆ ಮಾಡಿದ್ದರಿಂದ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಿದರು. ಅದರ ಪರಿಣಾಮ ಕರಾಳ ವಕ್ಫ್​ ಕಾಯ್ದೆ ರದ್ದಾಗಿದೆ.

ರೈತರಿಗೆ ಆಗುತ್ತಿರುವ ಅನ್ಯಾಯ ವಿರುದ್ಧ ಬಿಜೆಪಿ ಸಹ ದನಿಗೂಡಿಸಿದೆ. ವಕ್ಫ್​ ಪ್ರಹಸನದಿಂದಾಗಿ ಹಲವು ರೈತರು ಆತಂಕ ಪಡುವಂತಾಗಿತ್ತು. ಅನೇಕ ರೈತರು ಸಾಲಕ್ಕಾಗಿ ಅರ್ಜಿ ಹಾಕಲು ಹೋದಾಗ ಪಹಣಿಯಲ್ಲಿ ನಮೂದಿಸಿದ್ದ ವಕ್ಫ್​ ಪದ ನೋಡಿ ಕಣ್ಣೀರು ಸುರಿಸಿದ್ದರು. ಸದ್ಯ ಕೇಂದ್ರ ಸರ್ಕಾರದಿಂದ ರೈತರ ಆತಂಕ ದೂರವಾಗಿದೆ ಎಂದರು.

ರೈತರಾದ ಶಿವಾಜಿ ಜಾಧವ, ಮಾಳಪ್ಪ ಗುಗ್ಗರಿ, ಗೋವಿಂದ ರಜಪೂತ, ಚೆನ್ನಪ್ಪ ಕೋಟಿ, ತುಕಾರಾಮ ನಲವಡೆ ಹಾಗೂ ಲಕ್ಕಪ್ಪ ಕಾತ್ರಾಳ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಬಬಲೇಶ್ವರ ಮಂಡಳ ಅಧ್ಯ ಸಂತೋಷ ಕುರದಡ್ಡಿ, ಮಾಧ್ಯಮ ಪ್ರಮುಖ ವಿಜಯ ಜೋಶಿ ಮತ್ತಿತರರಿದ್ದರು.