ಜಿಲ್ಲೆ

ಸಿಇಒಗೆ ಗೌರವ ಡಾಕ್ಟರೇಟ್​ ಕೊಡಲಿ

ತುಮಕೂರು: ಇಡೀ ರಾಜ್ಯದಲ್ಲಿ ಮಾದರಿ ಸಿಇಒ ಜಿ.ಪ್ರಭು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಸಿಇಒಗೆ ತುಮಕೂರು ವಿವಿಯ ಗೌರವ ಡಾಕ್ಟರೇಟ್​ ಕೊಡಲಿ ಎಂದು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಒತ್ತಾಯಿಸಿದರು.

ನಗರದ ಹೊರವಲಯದ ಡಾ.ಎಚ್​.ಎಂ.ಗಂಗಾಧರಯ್ಯ ಮೆಮೋರಿಯಲ್​ ಹಾಲ್​ನಲ್ಲಿ ಶನಿವಾರ ಜಿಪಂ ವತಿಯಿಂದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ಹೆಚ್ಚಿನ ಅಧಿಕಾರ ಹೊಂದಿದ್ದು ಪಿಡಿಒಗಳ ಕೈಲಿ ಕೆಲಸ ತೆಗೆಸಬೇಕು. ಅಧಿಕಾರಿಗಳು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡುತ್ತಾರೆ. ಕೆಲವು ಕಡೆ ಪಿಡಿಒನೇ ಮಹಾರಾಜನಾಗಿ ಬಿಡುತ್ತಾನೆ. ಇನ್ನೂ ಸಚಿವ ಪರಮೇಶ್ವರ ಮನೆ ಇರುವ ಹೆಗ್ಗೆರೆ ಪಂಚಾಯಿತಿಯಲ್ಲಿ ಯಾರನ್ನು ಮಾತನಾಡಸಲಿಕ್ಕೆ ಆಗುವುದಿಲ್ಲ. ಸಚಿವರು ಹೆಗ್ಗೆರೆ ಹಾಗೂ ಮತ್ತೊಂದು ಗ್ರಾಪಂ ಅನ್ನು ದತ್ತು ಸ್ವೀಕರಿಸಲಿ, ಕಸಬಾ ಹೋಬಳಿಗೆ ಸೇರುವ ಇನ್ನೆರಡು ಗ್ರಾಪಂಗಳನ್ನು ಜಿಲ್ಲಾಧಿಕಾರಿಗಳು ದತ್ತು ಸ್ವೀಕರಿಸಲಿ ಎಂದು ಹೇಳುವ ಮೂಲಕ ಪಂಚಾಯಿತಿ ಅವ್ಯವಸ್ಥೆಯನ್ನು ತೆರೆದಿಟ್ಟರು.

ಎಮ್ಮೆ ಕಾಯೋ ಅಜ್ಜಿ ಅಧ್ಯಕ್ಷ ಸ್ಥಾನಕ್ಕೇರಿದ್ದು ! ನಮ್ಮೂರಲ್ಲಿ ಸಿದ್ದಗಂಗಮ್ಮ ಎಂಬ ಅಜ್ಜಿ ಎಮ್ಮೆ ಕಾಯ್ತಾ ಇತ್ತು. ಊರಿನ ಹುಡಗರೆಲ್ಲಾ ಸೇರಿ ಅಜ್ಜಿ ನಾ ಪಂಚಾಯಿತಿ ಎಲೆಕ್ಷನ್​ಗೆ ನಿಲ್ಲಿಸಿ ಗೆಲ್ಲಿಸಿಬಿಟ್ಟರು. ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳಾ ಮೀಸಲಾಗಿದ್ದರಿಂದ ಅಜ್ಜಿ ಅಧ್ಯಕ್ಷ ಸ್ಥಾನಕ್ಕೇರಿತು. ಇದೆಲ್ಲಾ ಕಾರಣವಾಗಿದ್ದು ಅಧಿಕಾರ ವಿಕೇಂದ್ರೀಕರಣದ ಜತೆ ಸ್ಥಳಿಯ ಸಂಸ್ಥೆಗಳಲ್ಲಿ ಪರಿಶಿಷ್ಟ, ಮಹಿಳಾ ಮೀಸಲು ಜಾರಿ ತರುವ ಮೂಲಕ ಈ ವ್ಯವಸ್ಥೆಯಲ್ಲಿ ದೇಶದ ಲಕ್ಷಾಂತರ ಮಹಿಳೆಯರು ಭಾಗವಾಗುವಂತಾಯಿತು. ಗ್ರಾಮ ಪಂಚಾಯುತಿ ಅಧ್ಯಕ್ಷ, ಉಪಾಧ್ಯಕ್ಷರಾಗಲು ಯಾವುದೇ ರಾಜಕೀಯ, ಶೈಕ್ಷಣಿಕ ಹಿನ್ನೆಲೆ ಹೊಂದಿರಬೇಕಾಗಿಲ್ಲ. ಯಾವುದೇ ಹಿನ್ನೆಲೆ ಇಲ್ಲದಿದ್ದರು ಅಧ್ಯಕ್ಷರಾಗಬಹುದು ಎಂದು ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ನಡೆಯುತ್ತಿರುವ ಜಲ್​ ಜೀವನ್​ ಮಿಷನ್​ ಯೋಜನೆಯಡಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರಿನ ಅಭಿಯಾನವು ಪ್ರಗತಿಯಲ್ಲಿದ್ದು, ಈವರೆಗೆ 1469 ಗ್ರಾಮಗಳಲ್ಲಿ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇನ್ನು 1400 ಗ್ರಾಮಗಳಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮುಂದಿನ ಡಿಸೆಂಬರ್​ ಒಳಗಾಗಿ ಶೇ. 90ರಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಜಿ.ಪ್ರಭು ಜಿಪಂ ಸಿಇಒ ಗ್ರಾಪಂ ಅಧಿಕಾರಿಗಳು ರೈತರನ್ನು ಕಚೇರಿಗೆ ಅಲೆದಾಡಿಸದೇ ಅವರ ಕೆಲಸಗಳನ್ನು ಆದ್ಯತೆ ಮೇಲೆ ಮಾಡಿಕೊಡಬೇಕು. ಈ ಕಾರ್ಯಾಗಾರವು ಪಂಚಾಯತಿ ಅಧಿಕಾರಿಗಳಿಗೆ ಸ್ಫೂರ್ತಿ, ಹೊಸ ಶಕ್ತಿ ತುಂಬಲಿ. ತುಮಕೂರು ಜಿಲ್ಲೆಗೆ ಏರ್​ಪೋರ್ಟ್​ ತರಲಿ. ಆ ಮೂಲಕ ಅಭಿವೃದ್ಧಿ ಹೊಂದಲಿಕ್ಕೆ ಸಾಧ್ಯವಾಗಲಿದೆ. ಎಂ.ಟಿ.ಕೃಷ್ಣಪ್ಪ ತುರುವೇಕೆರೆ ಶಾಸಕ