ಮಡಿಕೇರಿ:
ಕೊಡಗಿಗೆ ಪ್ರವಾಸಿಗರು ಇಲ್ಲಿಯ ಪ್ರಾಕೃತಿಕ ಸೌಂದರ್ಯ ಸವಿಯುವುದಕ್ಕೆ ಮಾತ್ರ ಬರುವುದಿಲ್ಲ. ಜಿಲ್ಲೆಯ ಪ್ರವಾಸೋದ್ಯಮವನ್ನು ದುರುಪಯೋಗಪಡಿಸಿಕೊಂಡು ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳುವುದಕ್ಕಾಗಿಯೂ ಆಗಮಿಸುವವರು ಇದ್ದಾರೆ. ಸ್ಥಳೀಯರು ಕೂಡ ಇಂಥದ್ದಕ್ಕೆ ಪ್ರೋತ್ಸಾಹಕೊಡುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವ ಪ್ರಯತ್ನ ನಡೆದಿದೆ. ಈ ರೀತಿಯ ಒಂದು ದಂಧೆಯನ್ನು ಕೊಡಗು ಪೊಲೀಸರು ಬಯಲಿಗೆ ಎಳೆದಿದ್ದಾರೆ.
ವಾರಾಂತ್ಯ ಮತ್ತು ಇತರ ರಜಾ ದಿನಗಳು ಬಂದರೆ ಸಾಕು ಕೊಡಗು ಪ್ರವಾಸಿಗರಿಂದ ಗಿಜಿಗುಡಲಾರಂಭಿಸುತ್ತದೆ. ಮಳೆನಾಡಿನ ಮಡಿಲಲ್ಲಿ ಇರುವ ಕೊಡಗಿನ ಶ್ರೀಮಂತ ಪ್ರಕೃತಿಯನ್ನು ಸವಿಯಬೇಕು. ಇಲ್ಲಿಯ ಅಪರೂಪದ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬೇಕು. ವಿಭಿನ್ನವಾದ ಖಾದ್ಯಗಳ ರುಚಿ ನೋಡಬೇಕು, ಪವಿತ್ರ ಸ್ಥಳಗಳನ್ನು ಸಂದರ್ಶಿಸಬೇಕು ಎಂದು ಒಳ್ಳೆಯ ಉದ್ದೇಶದಿಂದ ಆಗಮಿಸುವ ಪ್ರವಾಸಿಗರು ಮತ್ತು ಇವರನ್ನು ಸತ್ಕರಿಸಲು ಸಜ್ಜಾಗಿರುವ ರೆಸಾರ್ಟ್, ಹೋಮ್ ಸ್ಟೇ, ಹೊಟೇಲ್, ಲಾಡ್ಜ್‌ಗಳು ಒಂದು ಕಡೆ ಜಿಲ್ಲೆಯ ಹೆಸರನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಕೆಲಸ ಮಾಡುತ್ತಿದ್ದಾರೆ.
ಮತ್ತೊಂದು ಕಡೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಇರುವಂತೆ ಇಲ್ಲೂ ಜಿಲ್ಲೆಯ ಹೆಸರಿಗೆ ಮಸಿ ಬಳಿಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಒಮ್ಮೆಲೇ ಹಣ ಮಾಡಬೇನ್ನುವ ದುರಾಸೆಯವರು ಪ್ರವಾಸೋದ್ಯಮದ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಕೆಲವು ಅನಧಿಕೃತ ಹೋಮ್‌ಸ್ಟೇಗಳು ಇದಕ್ಕೆಂದೇ ತಲೆ ಎತ್ತಿರುವಂತೆ ಕಾರ್ಯಾಚರಿಸುತ್ತಿವೆ. ಇಂಥಹ ಒಂದು ಪ್ರಕರಣವನ್ನು ಕೊಡಗು ಪೊಲೀಸರು ಬಯಲಿಗೆ ಎಳೆದಿದ್ದಾರೆ. ಪ್ರವಾಸೋದ್ಯಮದ ಹೆಸರೇಳಿಕೊಂಡು ದಂಧೆ ನಡೆಸುವವರಿಗೆ ಇದು ಎಚ್ಚರಿಕೆಯ ಗಂಟೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಮಂಗಳೂರಿನಿಂದ ಪ್ರವಾಸಕ್ಕಾಗಿ ಮಡಿಕೇರಿ ಆಗಮಿಸಿದ್ದ ೧೪ ಮಂದಿ ಪ್ರವಾಸಿಗರು ಮಧ್ಯವರ್ತಿ ಮೂಲಕ ಸಮೀಪದ ಮಕ್ಕಂದೂರು ಬಳಿಯ ಹೋಮ್‌ಸ್ಟೇ ಒಂದರಲ್ಲಿ ತಂಗಿದ್ದಾರೆ. ಈ ವೇಳೆ ಈ ಹೋಮ್‌ಸ್ಟೇಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ದಾಳಿ ನಡೆಸಿದ ವೇಳೆ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ೧೪ ಮಂದಿಯನ್ನು ಪೊಲೀಸರು ಬಂಧಿಸಿದದ್ದಾರೆ. ಇವರಿಂದ ೪೧೪ ಗ್ರಾಂ. ಗಾಂಜಾ ಮತ್ತು ೯ ಎಲ್‌ಎಸ್‌ಡಿ ನಿಷೇದಿತ ಮಾದಕ ವಸ್ತುಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಮಧ್ಯವರ್ತಿ, ಹೋಮ್‌ಸ್ಟೇ ಮಾಲೀಕನೂ ಬಂಧಿತನಾಗಿದ್ದಾನೆ.
ಜಿಲ್ಲೆಯ ಕೆಲವು ಹೋಮ್‌ಸ್ಟೇಗಳಲ್ಲಿ ಇಂತಹ ಅಕ್ರಮ ದಂಧೆ ಸಾಮಾನ್ಯ ಎನ್ನುವಂತಾಗಿದೆ. ಈ ಬಗ್ಗೆ ಸಾಕಷ್ಟು ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿದೆ. ಈ ದಾಳಿ ಮೂಲಕ ಪೊಲೀಸರು ಸ್ಪಷ್ಟ ಸಂದೇಶ ರವಾನಿಸಿದ್ದು, ಕಾನೂನು ರೀತಿಯಲ್ಲಿ ಪ್ರವಾಸೋದ್ಯಮ ನಡೆಸದಿದ್ದರೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.