ಪಾಂಡವಪುರ: ತಾಲೂಕಿನ ಜಯಂತಿನಗರ ಸಮೀಪದ ಮೈಸೂರು-ಕೆ.ಆರ್.ಪೇಟೆ ರಸ್ತೆಯಲ್ಲಿ ಮನೆ ದರೋಡೆ ನಡೆಸಲು ಶನಿವಾರ ಸಂಜೆ ನುಗ್ಗಿದ ಖದೀಮನೊಬ್ಬ ಮನೆ ಯಜಮಾನನ್ನು ಮರ ಕೊಯ್ಯುವ ಯಂತ್ರ (ಗರಗಸ)ದಿಂದ ಅಮಾನುಷವಾಗಿ ಕೊಲೆಗೈದು, ಆತನ ಪತ್ನಿಯನ್ನು ಗಂಭಿರವಾಗಿ ಗಾಯಗೊಳಿಸಿದ್ದಾನೆ. ಈ ಘಟನೆಯಿಂದ ತಾಲೂಕಿನ ಜನತೆ ಬೆಚ್ಚಿ ಬಿದ್ದಿದ್ದಾರೆ.
ದರೋಡೆಕೋರನಿಂದ ತೀವ್ರ ಹಲ್ಲೆಗೊಳಗಾಗಿದ್ದ ರಮೇಶ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತನ ಪತ್ನಿ ಯಶೋದಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆ ನಡೆಸಲು ಬಂದು ಕೊಲೆಗೈದಿರುವ ಆರೋಪಿ ಶ್ರೀರಂಗಪಟ್ಟಣದ ನಿವಾಸಿ ಮಹಮ್ಮದ್ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ: ತಾಲೂಕಿನ ಜಯಂತಿನಗರದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಎದುರಿನ ತಮ್ಮ ಜಮೀನಿನಲ್ಲಿ ಇಟ್ಟಿಗೆಗೂಡು ಫ್ಯಾಕ್ಟರಿ ನೋಡಿಕೊಂಡು ಒಂಟಿ ಮನೆಯಲ್ಲಿ ಮಗ ಸಂತೋಷ್‌ನೊಂದಿಗೆ ಮೃತ ರಮೇಶ ಮತ್ತು ಆತನ ಪತ್ನಿ ಯಶೋದಾ ವಾಸವಿದ್ದರು. ಘಟನೆ ನಡೆದ ಸಮಯದಲ್ಲಿ ಆತನ ಮಗ ಡೇರಿಗೆ ಹಾಲು ಹಾಕುವ ಕಾರಣಕ್ಕಾಗಿ ಹೊರ ಹೋಗಿದ್ದರು ಎಂದು ತಿಳಿದುಬಂದಿದೆ. ಒಂಟಿ ಮನೆಯನ್ನೇ ಟಾರ್ಗೆಟ್ ಮಾಡಿದ್ದ ಆರೋಪಿ ಶನಿವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಮನೆ ಬಾಗಿಲು ತಟ್ಟಿದ್ದಾನೆ. ಯಾರಿರಬಹುದೆಂದು ಕಿಟಕಿ ತೆರೆದು ವಿಚಾರಿಸಿದ ಯಶೋದಾ ಅವರಿಗೆ ನೀವು ಆನ್‌ಲೈನ್ ಮೂಲಕ ಖರೀದಿಸಿದ ವಸ್ತುವನ್ನು ಡೆಲಿವರಿ ಮಾಡಲು ಬಂದಿದ್ದು, ಬಾಗಿಲು ತೆರೆಯಿರಿ ಎಂದು ಪುಸಲಾಯಿಸಿದ್ದಾನೆ. ಬಾಗಿಲು ತೆರೆದ ಕೂಡಲೇ ಗರಗಸದ ಯಂತ್ರದಿಂದ ಆಕೆಯ ಮೇಲೆ ಹಲ್ಲೆ ನಡೆಸಸಲಾಗಿದ್ದು, ಆಘಾತಕ್ಕೊಳಕ್ಕಾದ ಯಶೋದಮ್ಮ ಕುಸಿದು ಜ್ಞಾನ ತಪ್ಪಿದ್ದಾರೆ. ಬಳಿಕ ಮನೆಗೆ ನುಗ್ಗಿದ ಆರೋಪಿ ಮಹಮ್ಮದ್ ಇಬ್ರಾಹಿಂಗೆ ತಡೆಯೊಡ್ಡಿದ ಮನೆ ಮಾಲೀಕ ರಮೇಶ ಮೇಲೆ ಗರಗಸದಿಂದ ಮನಸ್ಸೋಇಚ್ಛೆ ಹಲ್ಲೆ ನಡೆಸಿ ಆತ ಸಾವನ್ನಪ್ಪಿದ ಮೇಲೆ ಕಳ್ಳತನಕ್ಕೆ ಮುಂದಾಗಿದ್ದಾನೆ.
ಸ್ವಲ್ಪ ಹೊತ್ತಿನ ಬಳಿಕ ಸುಧಾರಿಸಿಕೊಂಡು ಎಚ್ಚರಗೊಂಡ ಯಶೋಧಮ್ಮನಿಗೆ ಖದೀಮ ಮನೆಯೊಳಗಿರುವುದು ಅರಿವಾಗಿ ತಕ್ಷಣ ಮನೆ ಬಾಗಿಲು ಹೊರಗಿನಿಂದ ಬಂದ್ ಮಾಡಿ, ಮುಖ್ಯರಸ್ತೆಗೆ ಬಂದು ಸುತ್ತಮುತ್ತಲಿನ ಜನರು ಮತ್ತು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ವಿಚಾರ ತಿಳಿದು ತಂಡೋಪತಂಡವಾಗಿ ಆಗಮಿಸಿದ ಗ್ರಾಮದ ಸುತ್ತಮುತ್ತಲಿನ ನಿವಾಸಿಗಳು ಆರೋಪಿಗೆ ಹಿಗ್ಗಾಮಗ್ಗಾ ತಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪಾಂಡವಪುರ ಮತ್ತು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಆಯುಧದೊಂದಿಗೆ ಕೊಲೆ ಆರೋಪಿ ಮಹಮ್ಮದ್ ಇಬ್ರಾಹಿಂನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.’
ಆನ್‌ಲೈನ್ ಗೇಮ್ ದರೋಡೆಗೆ ಕಾರಣವಾಯಿತಾ?: ಕೊಲೆ ಆರೋಪಿ ಶ್ರೀರಂಗಪಟ್ಟಣದ ನಿವಾಸಿ ಮಹಮ್ಮದ್ ಇಬ್ರಾಹಿಂ ನಂಜನಗೂಡಿನ ಟಿವಿಎಸ್ ಫ್ಯಾಕ್ಟರಿ ನೌಕರನಾಗಿದ್ದು, ಆನ್‌ಲೈನ್‌ನ ವಿವಿಧ ಗೇಮ್‌ಗಳ ಚಟಕ್ಕೆ ಬಿದ್ದು ವಿಪರೀತ ಸಾಲ ಮಾಡಿಕೊಂಡಿದ್ದ ಎನ್ನಲಾಗಿದ್ದು, ಸಾಲ ತೀರಿಸಲು ಕಳ್ಳತನದ ದಾರಿ ಹುಡುಕಿಕೊಂಡಿದ್ದ ಎನ್ನಲಾಗಿದೆ. ಈ ಹಿಂದೆ ಈತನ ವಿರುದ್ಧ ಯಾವುದೇ ಕಳ್ಳತನ, ದರೋಡೆ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.