ವಿಜಯವಾಣಿ ಸುದ್ದಿಜಾಲ ಉಡುಪಿ
ಹಿಂದಿನ ಕಾಲದಲ್ಲಿ ಕುಟುಂಬ ವೈದ್ಯರು ಸೇವೆ ಸಲ್ಲಿಸಲು ರೋಗಿಗಳ ಮನೆಗಳಿಗೇ ಭೇಟಿ ನೀಡುವ ಪದ್ಧತಿ ಇತ್ತು. ಅಂತಹ ಸೇವೆಗಳು ಇಂದು ಲಭ್ಯವಿಲ್ಲ. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದ, ದಿನನಿತ್ಯದ ತಪಾಸಣೆಯ ಅಗತ್ಯವಿರುವ ರೋಗಿಗಳು ಕಷ್ಟಪಡುವಂತಾಗುತ್ತಿದೆ. ಅಂತಹ ರೋಗಿಗಳ ಅಗತ್ಯತೆ ಪೂರೈಸಲು ಉಡುಪಿಯ ಲೊಂಬಾರ್ಡ್ ಆಸ್ಪತ್ರೆಯು ಹೋಮ್ಕೇರ್ ಸೇವೆ ಆರಂಭಿಸುತ್ತಲಿದೆ.
ಅನೇಕ ಹಿರಿಯ ನಾಗರಿಕರು ಮತ್ತು ಹಾಸಿಗೆ ಹಿಡಿದಿರುವ ಅಥವಾ ದೈಹಿಕ ಪರಿಶ್ರಮ ಮಾಡಲು ಆಗದ ದುರ್ಬಲ ರೋಗಿಗಳಿಗೆ ಹೋಮ್ಕೇರ್ ಸೇವೆ ಸೂಕ್ತ ಪರಿಹಾರವಾಗಿದೆ. ಆಸ್ಪತ್ರೆಯ ಆರೈಕೆ ತಂಡವು ರೋಗಿಗಳ ಮನೆಗಳಿಗೇ ತೆರಳಿ, ಅವರ ಮನೆಯ ಸೌಕರ್ಯದಲ್ಲಿಯೇ ಅಗತ್ಯ ವೈದ್ಯಕೀಯ ಸೌಲಭ್ಯ, ಸೇವೆ ನೀಡಲಿದೆ.
ಹೋಮ್ಕೇರ್ ಸೇವೆಯಲ್ಲಿ ಆಸ್ಪತ್ರೆಯ ವೈದ್ಯರು ಮಧ್ಯಾಹ್ನ 3ರಿಂದ -5 ಗಂಟೆ ನಡುವಿನ ಅವಧಿಯಲ್ಲಿ ಮನೆ ಭೇಟಿ ನೀಡುವರು. ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಅವರು ರೋಗಿಗಳಿಗೆ ಅವರ ಮನೆಯಲ್ಲಿಯೇ ವೈದ್ಯಕೀಯ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡುವರು. ಶುಶ್ರೂಷಾ ಆರೈಕೆ, ಪ್ರಯೋಗಾಲಯ ಪರೀಕ್ಷೆ, ಫಿಸಿಯೋಥೆರಪಿ ಮತ್ತು ಮಾಸಿಕ ಔಷಧಗಳ ವಿತರಣೆಯ ಸೇವೆಯೂ ಲಭ್ಯವಿವೆ.
1990ರ ದಶಕದಲ್ಲಿ ಲೊಂಬಾರ್ಡ್ ಆಸ್ಪತ್ರೆಯು ನೇತ್ರಶಾಸ್ತ್ರ ಸೇವೆಗಳಿಗೆ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ನೇತ್ರಶಾಸ್ತ್ರದಲ್ಲಿ ನಿಯಮಿತ ಹೊರರೋಗಿ ಸೇವೆ ಲಭ್ಯವಿರಲಿಲ್ಲ. ಈಗ ನೇತ್ರತಜ್ಞ ಡಾ. ಆರ್ಥರ್ ರೋಡ್ರಿಗಸ್ ಅವರು ಬೆಳಗ್ಗೆ 9:30ರಿಂದ ಮಧ್ಯಾಹ್ನ 12:30ರ ವರೆಗೆ ನಿಯಮಿತವಾಗಿ ಹೊರರೋಗಿಗಳಿಗೆ ಸೇವೆ ಒದಗಿಸಲಿದ್ದಾರೆ. ಅವರಲ್ಲದೆ, ಕನ್ಸಲ್ಟೆಂಟ್ ನೇತ್ರತಜ್ಞ ಡಾ. ನರೇಂದ್ರ ಶೆಣೈ ಅವರೂ ಸಹ ಸೇವೆ ಒದಗಿಸಲಿದ್ದಾರೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಸೇರಿದಂತೆ ನೇತ್ರಶಾಸ್ತ್ರದ ಎಲ್ಲ ರೀತಿಯ ಸೇವೆಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಗುರಿ ಆಸ್ಪತ್ರೆ ಹೊಂದಿದೆ.
ಶತಮಾನದಷ್ಟು ಹಳೆಯದಾದ ಉಡುಪಿಯ ಸಿಎಸ್ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ಲೊಂಬಾರ್ಡ್ ಹೋಮ್ಕೇರ್ (ಮನೆ ಆರೈಕೆ) ಸೇವೆ ಮತ್ತು ಹೊಸ ನೇತ್ರಶಾಸ್ತ್ರ ವಿಭಾಗವನ್ನು ಜೂ. 21ರಂದು ಬೆಳಗ್ಗೆ 11ಕ್ಕೆ ಚಿಟ್ಪಾಡಿಯಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಉದ್ಘಾಟಿಸಲಾಗುತ್ತಿದೆ. ಸಿಎಸ್ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯದ ಬಿಷಪ್ ರೈ.ರೆ. ಹೇಮಚಂದ್ರಕುಮಾರ್ ನೂತನ ಸೇವೆಗಳನ್ನು ಉದ್ಘಾಟಿಸಲಿದ್ದಾರೆ. ಆಸ್ಪತ್ರೆಯ ನೇತ್ರತಜ್ಞರಾದ ಡಾ.ನರೇಂದ್ರ ಶೆಣೈ, ಡಾ.ಆರ್ಥರ್ ರೋಡ್ರಿಗಸ್ ಮತ್ತು ಹಿರಿಯ ವೈದ್ಯಾಧಿಕಾರಿ ಡಾ.ಗಣೇಶ್ ಕಾಮತ್ ಪಾಲ್ಗೊಳ್ಳಲಿದ್ದಾರೆ. ಆಸ್ಪತ್ರೆಯ ನಿರ್ದೇಶಕ ಡಾ.ಸುಶೀಲ್ ಜತ್ತಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಲೊಂಬಾರ್ಡ್ ಆಸ್ಪತ್ರೆಯನ್ನು 1923ರ ಜೂ.15 ರಂದು ಯುವ ಸ್ವಿಸ್ ಮಿಷನರಿ ಡಾ. ಇವಾ ಲೊಂಬಾರ್ಡ್ ಸ್ಥಾಪಿಸಿರುವುದಾಗಿದೆ. ಇದು ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆ. ಕೇವಲ ಆರು ಹಾಸಿಗೆಗಳಿಂದ ಆರಂಭಗೊಂಡು, ಈಗ 125 ಹಾಸಿಗೆ, ಎಲ್ಲ ಪ್ರಮುಖ ಸೌಲಭ್ಯ ಹೊಂದಿದೆ. ಇದೀಗ ಲೊಂಬಾರ್ಡ್ ಹೋಮ್ಕೇರ್ ಮತ್ತು ನೇತ್ರಶಾಸ್ತ್ರ ಸೇವೆಯು ಈ ಪ್ರದೇಶದ ಜನರ ಪ್ರಮುಖ ಅಗತ್ಯತೆ ನೀಗಿಸಲಿದೆ. ಸಮಗ್ರ, ಸಹಾನುಭೂತಿಯ ಆರೋಗ್ಯ ಕೇಂದ್ರವಾಗಲು ಮತ್ತು ಆಸ್ಪತ್ರೆಯ ಕನಸು ನನಸಾಗಿಸುವಲ್ಲಿ ಈ ಸೇವೆಯು ದೊಡ್ಡ ಹೆಜ್ಜೆಯಾಗಿದೆ. ಡಾ.ಸುಶೀಲ್ ಜತ್ತಣ್ಣ.ನಿರ್ದೇಶಕ. ಲೊಂಬಾರ್ಡ್ ಆಸ್ಪತ್ರೆ, ಉಡುಪಿ