ಸಾಗರ: ರಾಜ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಗಳಲ್ಲಿ ಒಂದಾದ ಸಾಗರದ ಅಪ್ಸ್‌ಕೋಸ್ (ಅಡಕೆ ಪರಿಷ್ಕರಣ ಮಾರಾಟ ಸಹಕಾರ ಸಂಘ)ಗೆ ಐದು ವರ್ಷಕ್ಕೊಮ್ಮೆ ನಡೆಯುವ ನಿರ್ದೇಶಕರ ಚುನಾವಣೆಯಲ್ಲಿ ಹಳಬರ ತಂಡಕ್ಕೆ ಮತದಾರರು ಮತ್ತೆ ಮಣೆ ಹಾಕಿದ್ದಾರೆ.
ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದಲ್ಲಿ ಭಾನುವಾರ ಅತ್ಯಂತ ಬಿರುಸಿನ ಮತದಾನ ನಡೆಯಿತು. ಒಟ್ಟು 2,082 ಮತದಾರರು ಮತದಾನಕ್ಕೆ ಅರ್ಹರಾಗಿದ್ದು ಅದರಲ್ಲಿ 1,668 ಮತದಾರರು ಮತ ಚಲಾವಣೆ ಮಾಡಿದರು. ಶೇ.85ಕ್ಕೂ ಹೆಚ್ಚಿನ ದಾಖಲೆಯ ಮತದಾನವಾಯಿತು.
ಮತದಾನಕ್ಕೆ 15 ಕೌಂಟರ್‌ಗಳನ್ನು ಮಾಡಲಾಗಿತ್ತು, ಅಡಕೆ ಪರಿಷ್ಕರಣಾ ಮತ್ತು ಸಹಕಾರ ಸಂಘವು ಸಾಗರ, ಸೊರಬ, ಹೊಸನಗರ ಪ್ರಾಂತ್ಯಗಳನ್ನು ಒಳಗೊಂಡಿದೆ. ಒಟ್ಟು 16 ನಿರ್ದೇಶಕರ ಸ್ಥಾನಗಳಿದ್ದು ಅವುಗಳಲ್ಲಿ 5 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿತ್ತು. ಆ ಐದು ಸ್ಥಾನಗಳು ಹಾಲಿ ಅಧ್ಯಕ್ಷರಾಗಿರುವ ಸೂರ್ಯನಾರಾಯಣ ಖಂಡಿಕಾ ಗುಂಪಿನವರು. ಎದುರು ನಿಂತವರ ನಾಮಪತ್ರವನ್ನು ವಾಪಸ್ ತೆಗಿಸಿ ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅವುಗಳಲ್ಲಿ ಹೊಸನಗರ ಭಾಗದಿಂದ ಕಲ್ಯಾಣಪ್ಪ ಗೌಡ, ಎ.ಒ.ರಾಮಚಂದ್ರ, ಎಚ್.ಓಂಕೇಶ್ ಹಾಗೂ ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ ಚೌಡಪ್ಪ ಹುಲಿಮನೆ, ಹಿಂದುಳಿದ ಎ ಮೀಸಲಾತಿಯಲ್ಲಿ ಕೆ.ಎಂ.ಸತ್ಯನಾರಾಯಣ ಕೆಳದಿ ಅವಿರೋಧವಾಗಿ ಆಯ್ಕೆಯಾಗಿದ್ದರು.
ಇನ್ನುಳಿದ 11 ಸ್ಥಾನಗಳಿಗೆ 18 ಜನ ಸ್ಪರ್ಧಿಸಿದ್ದರು. 11 ಸ್ಥಾನಗಳಿಗೂ ಸೂರ್ಯನಾರಾಯಣ ಮತ್ತು ಬಿ.ಎ.ಇಂದೂಧರ ಬೇಸೂರು ಅವರ ಜೋಡಿ ಸಂಪೂರ್ಣ ಮೇಲುಗೈ ಸಾಧಿಸಿ ಚುನಾವಣೆಯಲ್ಲಿ ಕಮಾಲ್ ಮಾಡಿದೆ. ಹಾಲಿ ಆಡಳಿತ ಮಂಡಳಿ ಕೆಲವು ಹೊಸಬರನ್ನು ಸೇರಿಸಿಕೊಂಡು ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಉಳಿದ ಸ್ಪರ್ಧಿಗಳು ಯಾರೂ 400 ಮತಗಳ ಗಡಿಯನ್ನು ದಾಟಲಿಲ್ಲ.
ಚುನಾವಣಾ ಅಧಿಕಾರಿಗಳಾಗಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಗೋಪಾಲ್ ಕಾರ್ಯನಿರ್ವಹಿಸಿದರು. ಪೊಲೀಸರು ಬಿಗಿ ಬಂದೋಬಸ್ ಒದಗಿಸಿದ್ದರು.
ಗೆಲವು ಕಂಡ ಅಭ್ಯರ್ಥಿಗಳು ಮತ್ತು ಪಡೆದ ಮತ: ಬಿ.ಎ.ಇಂದೂಧರ ಬೇಸರೂ-1,463, ಟಿ.ಆರ್.ಕೃಷ್ಣಮೂರ್ತಿ ದೂಗೂರು-1,274, ಎ.ಎಸ್.ನಾಗರತ್ನಾ ನೀಚಡಿ-1,238, ನಂದಕುಮಾರ್ ಗೋಳಿಬೀಡು-1,071, ಎಂ.ಡಿ.ಭಾರತಿ ಕರ್ಕಿಕೊಪ್ಪ -1,278, ಕೆ.ಎಸ್.ಭಾಸ್ಕರ ಭಟ್ಟ-1,225, ಎಂ.ಬಿ.ರಮೇಶ್ ಮೇಲಿನಮನೆ-1,240, ಕೆ.ಎಚ್.ರಾಘವೇಂದ್ರ ಹೊಡಬಟ್ಟೆ-1,297, ವೈ.ಎನ್.ಸುರೇಶ್ ಇಳಿ -1.130, ಕೆ.ಎಸ್.ಸುಬ್ಬರಾವ್ ಕೇಳಲೇಸರ- 1,325, ಕೆ.ಎಂ.ಸೂರ್ಯನಾರಾಯಣ ಖಂಡಿಕಾ-1,373.
65 ದಾಟಿದವರೇ ಹೆಚ್ಚು: ಮತದಾನ ಮಾಡಿದ ಮತದಾರರ ಪೈಕಿ ಶೇ.35 ಮಂದಿ 65 ವರ್ಷ ದಾಟಿದವರ ಸಂಖ್ಯೆ ಹೆಚ್ಚಿತ್ತು. ಕೆಲವರಿಗೆ ಓಡಾಡುವ ಸಮಸ್ಯೆ, ಕಿವಿಯೂ ಕೇಳಿಸುತ್ತಿರಲಿಲ್ಲ. ಕುಟುಂಬದವರು, ಗ್ರಾಮಸ್ಥರ ಸಹಕಾರ ಪಡೆದು ಸರದಿಯಲ್ಲಿ ನಿಂತು ಮತದಾನ ಮಾಡಿದ್ದು ವಿಶೇಷವೆನಿಸಿತು. ಮತದಾನ ಮಾಡಿದವರಲ್ಲಿ ಹಿರಿಯ ಸಹಕಾರಿ ಧುರೀಣ ಎಂ.ಹರನಾಥರಾವ್ ಮತ್ತಿಕೊಪ್ಪ, ತ್ಯಾಗರ್ತಿ ಭಾಗದ 87 ವರ್ಷದ ಅಕ್ಕನಾಗಮ್ಮ, ಮುಂತಾದವರಿದ್ದರು.