ಜಿಲ್ಲೆ

ಹೋಂ ಸ್ಟೇ ನೋಂದಣಿಗೆ ನಿರಾಸಕ್ತಿ

ಸುನಿಲ್ ಪೊನ್ನೇಟಿ

ಮಡಿಕೇರಿ:

ಉತ್ತಮ ರೀತಿಯಲ್ಲಿ ಆತಿಥ್ಯ ನೀಡುವ ಮೂಲಕ ಕೊಡಗಿನ ಹೋಮ್‌ಸ್ಟೇಗಳು ಪ್ರವಾಸಿಗರಿಗೆ ಹೆಚ್ಚು ಹತ್ತಿರ ಆಗುತ್ತಿವೆ. ಹಾಗಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಆತಿಥ್ಯದ ಮನೆಗಳಲ್ಲಿ ಆಶ್ರಯ ಪಡೆಯುವುದು ಸಾಮಾನ್ಯ. ಆದರೆ ಕೆಲವೊಂದು ಅನಧಿಕೃತ ಹೋಮ್‌ಸ್ಟೇಗಳಲ್ಲಿ ಆಗಾಗ್ಗೆ ವರದಿ ಆಗುವ ಕಾನೂನುಬಾಹಿರ ಚಟುವಟಿಕೆಗಳು ಈ ಉದ್ಯಮದ ಮೇಲೆ ಕಪ್ಪು ಚುಕ್ಕೆಯಂತೆ ಕಂಡುಬರುತ್ತಿದೆ. ಇದೇ ಕಾರಣಕ್ಕಾಗಿಯೇ ಹೋಮ್‌ಸ್ಟೇಗಳ ಕಡ್ಡಾಯ ನೋಂದಣಿಗೆ ಜಿಲ್ಲಾಡಳಿತ ಸೂಚಿಸಿದ್ದರೂ ನಿರೀಕ್ಷಿತ ರೀತಿಯಲ್ಲಿ ಪ್ರತಿಕ್ರಿಯೆ ಸಿಗುತ್ತಿಲ್ಲ.

ಈ ತಿಂಗಳ 5ರಂದು ಮಡಿಕೇರಿಯ ಅನಧಿಕೃತ ಹೋಮ್‌ಸ್ಟೇ ಒಂದರಲ್ಲಿ ತಂಗಿದ್ದ ತಾಯಿ ಮತ್ತು ಮಗಳಿಗೆ ಅಲ್ಲಿಯ ಕೇರ್ ಟೇಕರ್ ಮಧ್ಯರಾತ್ರಿಯಲ್ಲಿ ಕಿರುಕುಳ ನೀಡಿದ್ದ ವಿಷಯ ದೊಡ್ಡ ಸುದ್ದಿ ಆಗಿತ್ತು. ಈ ಘಟನೆ ಜಿಲ್ಲೆಯ ಹೋಮ್‌ಸ್ಟೇಗಳಲ್ಲಿನ ಸುರಕ್ಷತೆಯನ್ನೇ ಪ್ರಶ್ನೆ ಮಾಡುವಂತೆ ಇದ್ದ ಕಾರಣ ಕೂಡಲೇ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ಆರೋಪಿ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದಲ್ಲದೆ ಮುಂದೆ ಇಂಥ ಘಟನೆಗಳು ಮರುಕಳಿಸಬಾರದು ಎನ್ನುವ ಕಟ್ಟು ನಿಟ್ಟಿನ ಸೂಚನೆಯನ್ನು ಹೋಮ್‌ಸ್ಟೇ ನಿರ್ವಾಹಕರಿಗೆ ರವಾನಿಸಿತ್ತು.

ಕಳೆದ ವರ್ಷ ಮಂಗಳೂರಿನಿAದ ಪ್ರವಾಸಕ್ಕಾಗಿ ಮಡಿಕೇರಿ ಆಗಮಿಸಿದ್ದ 14 ಮಂದಿ ಪ್ರವಾಸಿಗರು ಮಧ್ಯವರ್ತಿ ಮೂಲಕ ಸಮೀಪದ ಮಕ್ಕಂದೂರು ಬಳಿಯ ಹೋಮ್‌ಸ್ಟೇ ಒಂದರಲ್ಲಿ ತಂಗಿದ್ದರು. ಈ ವೇಳೆ ಈ ಹೋಮ್‌ಸ್ಟೇಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಮಾಡುತ್ತಿರುವ ಖಚಿತ ಮಾಹಿತಿ ಪೊಲೀಸರಿಗೆ ಸಿಕ್ಕಿದ ಕೂಡಲೇ ದಾಳಿ ನಡೆಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ 14 ಮಂದಿಯನ್ನು ಪೊಲೀಸರು ಬಂಧಿಸಿದ್ದಲ್ಲದೆ 414 ಗ್ರಾಂ. ಗಾಂಜಾ ಮತ್ತು 9 ಎಲ್‌ಎಸ್‌ಡಿ ನಿಷೇದಿತ ಮಾದಕ ವಸ್ತುಗಳನ್ನೂ ವಶಪಡಿಸಿಕೊಂಡು ಮಧ್ಯವರ್ತಿ, ಹೋಮ್‌ಸ್ಟೇ ಮಾಲೀಕನನ್ನ ಬಂಧಿಸಿದ್ದರು.

ಈ ಪ್ರಕರಣಗಳು ಕೇವಲ ಉದಾಹರಣೆ ಮಾತ್ರ. ಕೊಡಗಿನ ಅನಧಿಕೃತ ಹೋಮ್ ಸ್ಟೇಗಳಲ್ಲಿ ವೇಶ್ಯಾವಾಟಿಕೆ, ರೇವ್‌ಪಾರ್ಟಿ, ಜೂಜಾಟ, ಬೆಟ್ಟಿಂಗ್... ಹೀಗೆ ಕಾನೂನು ಬಾಹಿರ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಕೊಡಗಿಗೆ ಪ್ರವಾಸಿಗರು ಇಲ್ಲಿಯ ಪ್ರಾಕೃತಿಕ ಸೌಂದರ್ಯ ಸವಿಯುವುದಕ್ಕೆ ಮಾತ್ರ ಬರುವುದಿಲ್ಲ. ಜಿಲ್ಲೆಯ ಪ್ರವಾಸೋದ್ಯಮವನ್ನು ದುರುಪಯೋಗಪಡಿಸಿಕೊಂಡು ತಮ್ಮ ದುಶ್ಚಟಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಆಗಮಿಸುವವರೂ ಇದ್ದಾರೆ. ಸ್ಥಳೀಯರು ಕೂಡ ಇಂಥದ್ದಕ್ಕೆ ಪ್ರೋತ್ಸಾಹಕೊಡುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತಲೇ ಇರುತ್ತದೆ. ಒಮ್ಮೆಲೇ ಹಣ ಮಾಡಬೇನ್ನುವ ದುರಾಸೆಯವರು ಪ್ರವಾಸೋದ್ಯಮದ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತಿರುತ್ತಾರೆ.

ಕೊಡಗಿನಲ್ಲಿ ಯಾವ ಊರಿಗೆ ಹೋದರೂ ಹೋಮ್‌ಸ್ಟೇಗಳು ಸಾಮಾನ್ಯ ಎಂಬAತಾಗಿದೆ. ಪ್ರವಾಸೋದ್ಯಮ ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 3,500 ಹೋಂ ಸ್ಟೇಗಳಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಸಂಖ್ಯೆ ಇನ್ನೂ ಹೆಚ್ಚು ಇರುವ ಸಾಧ್ಯತೆಗಳಿವೆ. ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ 2,269 ಹೋಂಸ್ಟೇಗಳು ನೋಂದಣಿ ಮಾಡಿಕೊಂಡಿವೆ. ಪ್ರವಾಸಿಗರ ಸಂಖ್ಯೆ ಇಳಿಮುಖ ಆಗಿದ್ದ ಕಾರಣಕ್ಕೆ ಕೊರೊನಾ ಕಾಲದಲ್ಲಿ ಶೇ.60ರಷ್ಟು ಹೋಮ್‌ಸ್ಟೇಗಳು ಬಾಗಿಲು ಮುಚ್ಚಿದ್ದವು. ಇದೀಗ ಪ್ರವಾಸೋದ್ಯಮ ಚೇತರಿಸಿಕೊಂಡಿರುವುದರಿAದ ಹೋಮ್‌ಸ್ಟೇಗಳು ಮತ್ತೆ ಎಲ್ಲೆಂದರಲ್ಲಿ ಹುಟ್ಟಿಕೊಳ್ಳುತ್ತಿವೆ.

ಹೋಮ್‌ಸ್ಟೇಗಳನ್ನು ಶಿಸ್ತುಬದ್ಧ ವ್ಯವಸ್ಥೆ ಅಡಿಯಲ್ಲಿ ಕಾರ್ಯಾಚರಿಸುವಂತೆ ಮಾಡಲು ಜಿಲ್ಲಾಡಳಿತ ಮೊದಲಿನಿಂದಲೂ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡ ನಂತರವಷ್ಟೇ ಪ್ರವಾಸಿಗರ ಆತಿಥ್ಯಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ನೋಂದಣಿ ವ್ಯವಸ್ಥೆ ಸರಳವಾಗಿದ್ದರೂ ಅನಧಿಕೃತ ಹೋಮ್‌ಸ್ಟೇಗಳ ನೋಂದಣಿಗೆ ಹೆಚ್ಚು ಆಸಕ್ತಿ ಕಂಡು ಬರುತ್ತಿಲ್ಲ

ಈ ಬಾರಿ ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ.

ನೋಂದಣಿಯಾಗದ ಹೋಂಸ್ಟೇಗಳನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಗೊಳ್ಳದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಲಾಗಿದೆ. ಈಗಾಗಲೇ ಪರವಾನಿಗೆ ಪಡೆದು ಕಾರ್ಯ ನಿರ್ವಹಿಸುತ್ತಿರುವ ಮತ್ತು ಪರವಾನಿಗೆ ಅವಧಿಯು 5 ವರ್ಷಗಳಿಗೆ ಮುಕ್ತಾಯಗೊಳ್ಳುತ್ತಿರುವ ಹೋಂಸ್ಟೇಗಳ ಪರವಾನಿಗೆ ನವೀಕರಿಸುವಂತೆಯೂ ಸೂಚಿಸಲಾಗಿದೆ. ನೋಂದಣಿ ಆಗದ ಅಥವಾ ಪರವಾವನಗಿ ನವೀಕರಿಸದ ಹೋಂ-ಸ್ಟೇ ಜಾಗದ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಹೋಮ್ ಸ್ಟೇಗಳನ್ನು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡುವ ಮೂಲಕ ಒಂದು ನಿಯಂತ್ರಿತ ವ್ಯವಸ್ಥೆ ಅಡಿಯಲ್ಲಿ ಕಾರ್ಯಾಚರಿಸುವಂತೆ ಮಾಡಿದರೆ ಹೊಮ್‌ಸ್ಟೇಗಳಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬಹುದು ಎನ್ನುವುದು ಪ್ರವಾಸೋದ್ಯಮಿಗÀಳ ಅಭಿಪ್ರಾಯ. ಜಾಗತಿಕ ಮಟ್ಟದಲ್ಲಿ ಉತ್ತಮ ಹೆಸರುಇ ಮಾಡುತ್ತಿರುವ ಕೊಡಗಿನ ಪ್ರವಾಸೋದ್ಯಮದ ಮೇಲೆ ಕಪ್ಪು ಚುಕ್ಕೆ ಬಾರದಂತೆ ನೋಡಿಕೊಳ್ಳಲು ಕೆಲವು ಕಠಿಣ ಕ್ರಮಗಳ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಸಾರ್ವಜನಿಕರೂ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬಹುದಾಗಿದ್ದು, ಮಾಹಿತಿ ಇಲ್ಲದೆ ಅನಧಿಕೃತವಾಗಿ ನಡೆಸುತ್ತಿರುವಂಥ ಹೋಂ-ಸ್ಟೇಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಮುಖಾಂತರ ಅಥವಾ ಫೋನ್ ಮೂಲಕ ಮಾಹಿತಿ ನೀಡಬಹುದಾಗಿದೆ. ಕಚೇರಿ ವಿಳಾಸ: ಉಪ ನಿರ್ದೇಶಕರ ಕಚೇರಿ, ಪ್ರವಾಸೋದ್ಯಮ ಇಲಾಖೆ, ಸ್ಟುವರ್ಟ್ ಹಿಲ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ 571201 ದೂರವಾಣಿ ಸಂಖ್ಯೆ: 08272-200519

ಮಡಿಕೇರಿಯ ಹೋಂಸ್ಟೇ ಒಂದರಲ್ಲಿ ಏ.5ರಂದು ನಡೆದಿರುವ ಘಟನೆ ಖಂಡನೀಯ. ಈ ಘಟನೆ ಕೊಡಗಿನ ಹೋಂಸ್ಟೇಗೆ ಒಂದು ಕಪ್ಪು ಚುಕ್ಕಿ ತರುವಂತಾಗಿದೆ. ಈ ಹೋಂಸ್ಟೇ ಕೂರ್ಗ್ ಹೋಂಸ್ಟೇ ಅಸೋಸಿಯೇಷನ್‌ನ ಸದಸ್ಯರಾಗಿರುವುದಿಲ್ಲ. ಕೆಲವು ದಿನಗಳ ಹಿಂದೆ ಹಂಪಿಯಲ್ಲಿ ಪ್ರವಾಸಿಗರ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆಗೆ ಸಂಬAದಿಸಿದAತೆ ಪ್ರವಾಸೋದ್ಯಮ ಇಲಾಖೆ ಹಾಗೂ ಪೋಲಿಸ್ ಇಲಾಖೆ ಮೂಲಕ ಕೊಡಗಿನ ಎಲ್ಲಾ ಹೋಂಸ್ಟೇ ಮಾಲೀಕರನ್ನು ಕರೆಸಿ ಇಂತಹ ಘಟನೆಗಳು ಮರುಕಳುಹಿಸದಂತೆ ಹಾಗೂ ಹೋಂಸ್ಟೇಗಳಲ್ಲಿ ತಂಗುವ ಪ್ರವಾಸಿಗರಿಗೆ ಸೂಕ್ತ ಭದ್ರತೆ ನೀಡುವಂತೆ ಸಲಹೆ ಸೂಚನೆಗಳನ್ನು ನೀಡಲಾಗಿತ್ತು.

ಮೊಂತಿ ಗಣೇಶ್, ಅಧ್ಯಕ್ಷೆ, ಕೂರ್ಗ್ ಹೋಂಸ್ಟೇ ಅಸೋಸಿಯೇಷನ್

ಕೊಡಗು ಜಿಲ್ಲೆಯಲ್ಲಿ ಅಂದಾಜು 3,500 ಹೋಂ ಸ್ಟೇಗಳಿರಬಹುದು ಎಂದು ಅಂದಾಜಿಸಲಾಗಿದೆ. ಈ ಪೈಕಿ ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ 2269 ಹೋಂಸ್ಟೇಗಳು ನೋಂದಣಿ ಮಾಡಿಕೊಂಡಿವೆ. ತಿಂಗಳಿಗೆ 30-50 ಹೊಸ ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ ಪ್ರವಾಸೋದ್ಯಮ ಇಲಾಖೆಯಡಿಯಲ್ಲಿ ನೋಂದಣಿಯಾಗದೆ ನಿಯಮ ಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಹೋಂ-ಸ್ಟೇಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ

ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ, ಕೊಡಗು