ಮೈಸೂರು: ಪೌಷ್ಟಿಕಾಂಶ ಹಾಗೂ ಗೃಹ ವಿಜ್ಞಾನದ ವಿಷಯಗಳು ಮುಂದುವರಿಯುತ್ತಿರುವ ಸಮಾಜಕ್ಕೆ ಅತಿ ಅಗತ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶದ ಅಧ್ಯಯನ ವಿಭಾಗದಿಂದ ಶುಕ್ರವಾರ ಆಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಹಾರ ಎಲ್ಲರಿಗೂ ಸಿಗುವುದು ಎಷ್ಟು ಮುಖ್ಯವೋ ಪೌಷ್ಟಿಕಾಂಶವೂ ದೇಹಕ್ಕೆ ಬೇಕು ಎನ್ನುವುದು ಅಷ್ಟೇ ಮುಖ್ಯ. ಹಾಗಾಗಿ ಆಹಾರ, ಪೌಷ್ಟಿಕಾಂಶ ಹಾಗೂ ಗೃಹ ವಿಜ್ಞಾನದ ವಿಷಯಗಳು ಮುಂದುವರಿಯುತ್ತಿರುವ ಸಮಾಜಕ್ಕೆ ಅತಿ ಅಗತ್ಯವಾಗಿದೆ. ಇದರ ಬಗ್ಗೆ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು, ಈ ವಿಭಾಗದ ಪ್ರಾಮುಖ್ಯವನ್ನು ಅರಿತು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಗೃಹ ವಿಜ್ಞಾನ ಸಂಘದ ಮೈಸೂರು ಘಟಕ ಉದ್ಘಾಟಿಸಿ, ಆಹಾರ ಮತ್ತು ಪೌಷ್ಟಿಕಾಂಶ ಕುರಿತ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಸಿಂಗ್, ಮಹಿಳೆ ಹಾಗೂ ತಾಯಿಯು ಗೃಹ ವಿಜ್ಞಾನದ ಸಮಾನಾರ್ಥಕ ವಿಚಾರಗಳು. ಇವು ಆಹಾರ ವಿಜ್ಞಾನ, ವ್ಯಕ್ತಿತ್ವ ವಿಕಾಸ, ಆಹಾರ ತಂತ್ರಜ್ಞಾನವನ್ನು ಒಳಗೊಂಡಿದೆ. ಗೃಹ ವಿಜ್ಞಾನದ ವಿಷಯವು ಮನೆಯಿಂದ ಆರಂಭವಾಗುತ್ತದೆ. ಮಗುವೊಂದು ತಾಯಿಯ ಬಳಿ ಅನೇಕ ಪ್ರಶ್ನೆ, ಸಂಶಯಗಳನ್ನು ಕೇಳುತ್ತದೆ. ಆದರೆ ತಂದೆಯೊಂದಿಗೆ ಅದು ತಾಯಿ ಎಲ್ಲಿದ್ದಾರೆ ಎಂಬ ಪ್ರಶ್ನೆಯನ್ನಷ್ಟೇ ಕೇಳುತ್ತದೆ. ಇಂತಹ ಸೂಕ್ಷ್ಮತೆಗಳ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಸ್ವಾಮಿನಾಥನ್ ಅವರು ಆಹಾರ ವಿಜ್ಞಾನ, ಪೌಷ್ಟಿಕಾಂಶದ ಕುರಿತು ಬೆಳಕು ಚೆಲ್ಲುವ ಪುಸ್ತಕ ಬರೆದಿದ್ದು, ಅದರ ಓದಿನಿಂದ ಅನೇಕ ಮಾಹಿತಿ ದೊರೆಯುತ್ತದೆ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಗೂಗಲ್ ಹಾಗೂ ಇಂಟರ್‌ನೆಟ್‌ನಲ್ಲಿ ದೊರೆಯುವ ಮಾಹಿತಿಗಿಂತ ಹೆಚ್ಚಿನ ಜ್ಞಾನ ಪುಸ್ತಕದಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.
ಓದಿನಿಂದಾಗಿ ತಾಳ್ಮೆ ಹಾಗೂ ನೆನೆಪಿನ ಶಕ್ತಿ ಹೆಚ್ಚುತ್ತದೆ. ಮೊಬೈಲ್ ಮುಂತಾದ ಆಧುನಿಕ ವಿಚಾರಗಳ ನಡುವೆಯೂ ಬೌದ್ಧಿಕ ಜ್ಞಾನಕ್ಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಲೇಖಕ ಪ್ರೊ.ಜಮುನಾ ಪ್ರಕಾಶ್, ದಿ ಬೆಂಗಳೂರು ಪ್ರಕಾಶನದ ನಿರ್ದೇಶಕ ಎ.ಎಚ್.ವಿಷ್ಣು, ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಕೋಮಲಾ ಇದ್ದರು.