ಜಿಲ್ಲೆ

ಹೋಂ ಕ್ವಾರಂಟೈನ್ ಮೇಲ್ವಿಚಾರಣೆಗೆ 460 ತಂಡ ರಚನೆ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಎಫ್​ಐಆರ್

vinaymk1969

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳ ಮೇಲೆ ನಿಗಾವಹಿಸಲು ವಿವಿಧ ಇಲಾಖೆ ಅಧಿಕಾರಿಗಳು ಹಾಗೂ 460 ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ಕ್ವಾರಂಟೈನ್ ನಿಯಮ ಉಲ್ಲಂಘಿಸಿದವರ ಮೇಲೆ ಎಫ್​ಐಆರ್ ದಾಖಲಿಸಲಾಗುತ್ತದೆ.

ಸಾರ್ವಜನಿಕರು ದೂರು ನೀಡಿ ನಗರದ 28 ವಿಧಾನಸಭಾ ಕ್ಷೇತ್ರದ ಬೂತ್​ವುಟ್ಟದ ಅಧಿಕಾರಿಗಳು, ಇಬ್ಬರು ಸ್ಥಳೀಯರು, ಜಲಮಂಡಳಿ, ಬೆಸ್ಕಾಂ, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳ ಸಿಬ್ಬಂದಿಯನ್ನು ತಂಡದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಈ ತಂಡಗಳು ಹೋಂ ಕ್ವಾರಂಟೈನ್​ನಲ್ಲಿರುವವರ ಆರೋಗ್ಯ ಪರೀಕ್ಷೆ, ಕಡ್ಡಯ ಕರೊನಾ ವಾಚ್ ಆಪ್ ಬಳಕೆ ಹಾಗೂ ಇತರೆ ಪರಿಶೀಲನೆ ಮಾಡುತ್ತವೆ. ಕ್ವಾರಂಟೈನ್​ನ ನಿಯಮ ಉಲ್ಲಂಘಿಸಿದರೆ ಅವರ ಮೇಲೆ ಎಫ್​ಐಆರ್ ದಾಖಲು ಮಾಡುವುದಕ್ಕೂ ತಂಡಕ್ಕೆ ಅವಕಾಶವಿದೆ. ಹೋಂಕ್ವಾರಂಟೈನ್ ನಿಯಮ ಉಲ್ಲಂಘಿಸಿದಲ್ಲಿ ಸಾರ್ವಜನಿಕರು ಪೊಲೀಸರಿಗೆ ಅಥವಾ ಬಿಬಿಎಂಪಿ ಸಹಾಯವಾಣಿ 9480685888ಗೆ ದೂರು ನೀಡಬಹುದು.

ಮಹಾರಾಷ್ಟ್ರ ಬಿಟ್ಟು ಉಳಿದ ಎಲ್ಲ ವಿದೇಶ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರನ್ನು ಹೋಂ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ ಕ್ವಾರಂಟೈನ್​ನಲ್ಲಿರಬೇಕಾದ ವ್ಯಕ್ತಿಗಳು ಹೊರಗೆ ಸಂಚಾರ ಮಾಡುತ್ತಿದ್ದಾರೆ. ಜತೆಗೆ ಇವರ ಕರೊನಾ ಪರೀಕ್ಷಾ ವರದಿ ಬರುವ ಮುನ್ನವೇ ಅವರು ಹಲವು ಜನರೊಂದಿಗೆ ಸಂಪರ್ಕ ಸಾಧಿಸುತ್ತಿದ್ದು, ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯ 198 ವಾರ್ಡ್​ಗಳಲ್ಲಿ ಈ ರೀತಿ 460 ಹೋಂಕ್ವಾರಂಟೈನ್ ನಿರ್ವಹಣಾ ತಂಡಗಳನ್ನು ರಚಿಸಲಾಗಿದೆ. ಆಯಾ ವಲಯಗಳ ಜಂಟಿ ಆಯುಕ್ತರು ತಂಡಗಳ ಮೇಲ್ವಿಚಾರಣೆ ಮಾಡಲಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್ ವಿನಾಯಿತಿ: ವಿದೇಶ ಅಥವಾ ಹೊರ ರಾಜ್ಯದಿಂದ ಬಂದ ಗರ್ಭಿಣಿಯರು, 10 ವರ್ಷದೊಳಗಿನ ಮಕ್ಲಳು, 60 ವರ್ಷ ಮೀರಿದ ವೃದ್ಧರು, ಪ್ರಯಾಣಿಕರ ಕುಟುಂಬದಲ್ಲಿ ಸಾವಿಗೀಡಾಗಿದ್ದರೆ ಅವರ ಸಂಸ್ಕಾರಕ್ಕೆ ಹೋಗುವವರಿಗೆ ಹಾಗೂ ವಿನಾಯಿತಿ ಕರೊನಾ ಸೋಂಕಿತನಲ್ಲದ ಕಾಯಿಲೆಯಿಂದ ಬಳಲುವವರಿಗೆ ವಿನಾಯಿತಿ ನೀಡಲಾಗಿದೆ.

ಹೋಂ ಕ್ವಾರಂಟೈನ್​ಗೆ ಪಾಲಿಕೆ ಕ್ರಮಗಳು: ವಿದೇಶ ಅಥವಾ ಹೊರ ರಾಜ್ಯಗಳಿಂದ ಬಂದ ವ್ಯಕ್ತಿಗಳ ಮನೆ ಬಾಗಿಲಿಗೆ ಹೋಂ ಕ್ವಾರಂಟೈನ್ ಭಿತ್ತಿಪತ್ರ ಅಂಟಿಸುವುದು. ಮನೆಯ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ, ನಿಯಮ ಉಲ್ಲಂಘನೆ ಮಾಡಿದರೆ ಮಾಹಿತಿ ನೀಡುವುದು.

ನಗರಕ್ಕೆ ಆಗಮಿಸಲು ಸೇವಾ ಸಿಂಧು ಪೋರ್ಟ್​ಲ್​ನಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಬೇಕು. ಕೈಗೆ ಸ್ಟ್ಯಾಂಪಿಂಗ್ ಹಾಗೂ ಕರೊನಾ ಸೋಂಕಿನ ಲಕ್ಷಣಗಳ ತಪಾಸಣೆ ಮಾಡಿಸಿಕೊಳ್ಳಬೇಕು. ಮಹಾರಾಷ್ಟ್ರದ ಬಂದ ಹೋಂಕ್ವಾರಂಟೈನ್ ಆಗುವವರು ಕಡ್ಡಾಯವಾಗಿ ಆರೋಗ್ಯ ಸೇತು, ಆಪ್ತಮಿತ್ರ ಹಾಗೂ ಕ್ವಾರಂಟೈನ್ ವಾಚ್ ಆಪ್​ಅನ್ನು ಕಡ್ಡಾಯವಾಗಿ ಡೌನ್​ಲೋಡ್ ಮಾಡಿಕೊಳ್ಳಬೇಕು.