ಜಿಲ್ಲೆ

ರಾಜ್ಯದಲ್ಲಿ ಕಾನೂನು‌‌‌ ಸುವ್ಯವಸ್ಥೆ ಕಾಪಾಡಲು ಗೃಹ ಸಚಿವರ ಸಲಹೆ

ಚಿಕ್ಕಬಳ್ಳಾಪುರ: ಆಂಧ್ರ ಗಡಿಭಾಗದಿಂದ ರಾಜ್ಯಕ್ಕೆ ಮಾದಕ ವಸ್ತುಗಳ ಸಾಗಾಣೆ ಹಾಗೂ ಮಾರಾಟದ ಅವ್ಯವಹಾರಗಳಿಗೆ ಕಡಿವಾಣ ಹಾಕಲು, ಪ್ರಮುಖವಾಗಿ ಜನರ ದೂರು ಪ್ರಕರಣಗಳಲ್ಲಿ ವಿಳಂಬ ತೋರದೇ ಕಡ್ಡಾಯವಾಗಿ ಎಫ್ ಐ ಆರ್ ದಾಖಲಿಸಲು ಗೃಹ ಸಚಿವ ಜಿ.ಪರಮೇಶ್ವರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪೊಲೀಸ್ ಇಲಾಖೆಯ ಪ್ರಗತಿಯ ಪರಿಶೀಲನಾ ಸಭೆಯಲ್ಲಿ ಗಸ್ತು ನಿರ್ವಹಣೆ, ಕಾನೂನು ಸುವ್ಯವಸ್ಥೆ, ಅಪಘಾತ ಹಾಗೂ ಅಪರಾಧ ಪ್ರಕರಣಗಳ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಯ ವಸತಿ ಸೌಕರ್ಯ ಪ್ರಮಾಣ ಮೊದಲು ಶೇ.25 ರಷ್ಟು ಇತ್ತು. ಈಗ ಶೇ.46 ರಷ್ಟು ಇದೆ. ಇದನ್ನು ಹಂತ ಹಂತವಾಗಿ ಶೇ.80 ಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿ ವೇತನ ಪರಿಷ್ಕರಣೆಗೆ ಔರಾಧ್ಕರ್ ಸಮಿತಿಯನ್ನು ರಚಿಸಲಾಗಿತ್ತು. ಇದರ ವರದಿಯಂತೆ ಸಂಬಳ ಎರಡು ಪಟ್ಟು ಹೆಚ್ಚಾಗಿದೆ. ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದ್ದು ಈಗಾಗಲೇ 545 ಸಬ್ ಇನ್ಸ್ ಪೆಕ್ಟರ್ಗಳ ನೇಮಕವಾಗಿ ತರಬೇತಿಯಲ್ಲಿದ್ದು ಇನ್ನು ಸಿಂಧುತ್ವ ಪ್ರಮಾಣ ಪಡೆದು 402 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಅಂತರ್ ಜಿಲ್ಲಾ, ಹೊರ ಜಿಲ್ಲಾ ವಿಭಾಗದಲ್ಲಿ ಪೊಲೀಸ್ ವರ್ಗಾವಣೆಗೆ ಆಯಾ ವ್ಯಾಪ್ತಿಯಲ್ಲಿನ ಸಿಬ್ಬಂದಿ ಕೊರತೆ, ಬೇರೆ ಭಾಗಗಳಲ್ಲಿ ಪತಿ ಪತ್ನಿ ಸಿಬ್ಬಂದಿ ಕಾರ್ಯ ನಿರ್ವಹಣೆಯನ್ನು ಪ್ರಮುಖವಾಗಿ ಪರಿಗಣಿಸಿ, ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇತರ ರಾಜ್ಯಗಳಿಗೆ ಹೋಲಿಸಿದ್ದಲ್ಲಿ ಕರ್ನಾಟಕದ ಕಾನೂನು ಸುವ್ಯವಸ್ಥೆಯು ಚೆನ್ನಾಗಿದೆ. ದೂರು ಪ್ರಕರಣಗಳಲ್ಲಿ ಪ್ರಾಮಾಣಿಕ ತನಿಖೆಯಾಗುತ್ತಿದೆ. ಆದರೆ, ಆರೋಪಗಳು ಕೇಳಿ ಬಂದ ತಕ್ಷಣ ಏನೇನೋ ಹೇಳುವುದೇ ಪ್ರಮುಖ ಕೆಲಸವಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ವಲಯದ ಐಜಿಪಿ ಲಾಬು ರಾಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಪ್ರಭಾರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಮತ್ತಿತರರು ಇದ್ದರು.