ಜಿಲ್ಲೆ

ಗಡಿಭಾಗದಲ್ಲಿ ಗೃಹ ಸಚಿವರ ತಪಾಸಣೆ, ಅನಗತ್ಯ ವಾಹನ ಸಂಚಾರಕ್ಕೆ ಶಿಸ್ತು ಕ್ರಮದ ಎಚ್ಚರಿಕೆ

Bengaluru Rural

ಆನೇಕಲ್: ತಮಿಳುನಾಡಿನಲ್ಲಿ ಕರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಗುರುವಾರ ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಮಿಷನರ್ ಭಾಸ್ಕರರಾವ್ ರಾಜ್ಯದ ಗಡಿಭಾಗವಾದ ಅತ್ತಿಬೆಲೆ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅತ್ತಿಬೆಲೆ ಗಡಿಯಲ್ಲಿ ತಮಿಳುನಾಡು ಪೊಲೀಸರು ಕರ್ನಾಟಕದ ಗಡಿ ಗೋಪುರದ ಬಳಿ ಚೆಕ್‌ಪೋಸ್ಟ್ ಹಾಕಿಕೊಂಡಿದ್ದನ್ನು ಪರಿಶೀಲಿಸಿದ ಸಚಿವ, ಗಡಿಯಲ್ಲಿ ಚೆಕ್‌ಪೋಸ್ಟ್ ಹಾಕಿಕೊಳ್ಳುವಂತೆ ಸೂಚನೆ ನೀಡಿದರು. ತಮಿಳುನಾಡಿನಿಂದ ಬರುವ ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ರಾಜ್ಯದ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ತಪಾಸಣೆ ನಡೆಸಲಾಗಿದೆ. ನಕಲಿ ಪಾಸ್‌ಗಳ ಮೂಲಕ ಸಂಚರಿಸುತ್ತಿರುವ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅನಗತ್ಯವಾಗಿ ಖಾಸಗಿ ವಾಹನ ಸಂಚಾರ ಕಂಡುಬಂದರೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಾಕೀತು ಮಾಡಿದರು. ಲಾಕ್‌ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸರ್ಕಾರ ಕ್ರಮಕೈಗೊಂಡಿದ್ದರೂ ಜನ ಅನವಶ್ಯಕವಾಗಿ ರಸ್ತೆಗೆ ಬರುತ್ತಿದ್ದಾರೆ. ಇಂಥವರ ಬಗ್ಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತಿತರರು ಇದ್ದರು.