ಉಡುಪಿ: ಲೋಕಸಭಾ ಚುನಾವಣೆಯಲ್ಲಿ ನಿರೀತ ಫಲಿತಾಂಶ ಲಭಿಸಿಲ್ಲ. ಹೀಗಾಗಿ ಸೋಲಿನ ಆತ್ಮಾವಲೋಕನ ಮಾಡಬೇಕಿದೆ. ಯಾಕೆ ಸೋತಿದ್ದೇವೆ, ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಚರ್ಚೆಯಾಗಬೇಕಿದೆ. ಹೀಗಾಗಿ ಹಿರಿಯರು ಅನುಭವಿಗಳ ಸಮಿತಿ ರಚಿಸಿ ವಿಶ್ಲೇಷಣೆ ಮಾಡಲು ತೀಮಾರ್ನಿಸಲಾಗಿದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ, ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಹೈಕಮಾಂಡ್ ಗೆ ರಾಜ್ಯದ ಪ್ರತಿಯೊಂದು ಲೋಕಸಭಾ ಕ್ಷೇತ್ರದ ಬಗ್ಗೆ ವಿವರವಾದ ಲೆಕ್ಕಕೊಡಬೇಕಿದೆ. ಹೀಗಾಗಿ ಸಮಿತಿ ರಚನೆಯಾಗಿ ಚರ್ಚೆ ನಡೆಸಲಾಗುವುದು ಎಂದರು.
ಗ್ಯಾರೆಂಟಿ ಯೋಜನೆ ನಿಲ್ಲಲ್ಲ
ಜನಸಾಮಾನ್ಯರ ಬಡತನ ನಿಮೂರ್ಲನೆಗೆ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೆವು. ಜನಕ್ಕೆ ಎಲ್ಲಾ 5 ಗ್ಯಾರೆಂಟಿ ಯೋಜನೆ ತಲುಪಿದೆ. ರಾಜಕೀಯಕ್ಕೆ ಗ್ಯಾರೆಂಟಿ ಲಾಭ ಆಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಹಾಗೆ ಆಗಿಲ್ಲ. ಆದರೂ ಗ್ಯಾರೆಂಟಿ ಯೋಜನೆ ನಿಲ್ಲಿಸೋದಿಲ್ಲ. ಗ್ಯಾರೆಂಟಿ ರಾಜಕೀಯ ಉದ್ದೇಶಕ್ಕಲ್ಲ. ಪಟ್ಟಣ ಪ್ರದೇಶದಲ್ಲಿ ಗ್ಯಾರೆಂಟಿ ಅವಶ್ಯಕತೆ ಇದೆಯೋ ಇಲ್ಲವೋ ಗೊತ್ತಿಲ್ಲ, ಹಳ್ಳಿ, ಗ್ರಾಮೀಣ ಭಾಗದ ಜನಕ್ಕೆ ಈ ಯೋಜನೆ ಉಪಯೋಗವಾಗುತ್ತಿದೆ. ಗ್ಯಾರೆಂಟಿ ಜೊತೆ ಅಭಿವೃದ್ಧಿ ಕಾರ್ಯ ಕೂಡಾ ಮಾಡುತ್ತೇವೆ. ರಾಜ್ಯದ ಬಜೆಟ್ ಗಾತ್ರ ಹಿಗ್ಗಿದೆ. ಅಭಿವೃದ್ಧಿಗೆ ಹಣಕಾಸು ತೊಂದರೆ ಇಲ್ಲ ಎಂದವರು ತಿಳಿಸಿದರು.
ಕಾಂಗ್ರೆಸ್ಗೆ ಹಿನ್ನಡೆಯಾಗಿಲ್ಲ
ರಾಜ್ಯದಲ್ಲಿ ಕಾಂಗ್ರೆಸ್ ಗೆ ಡಿಬ್ಯಾಕ್ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಮಗೆ ಹಿನ್ನಡೆಯಾಗಿಲ್ಲ. ನಾವು ಒಂದರಿಂದ 9 ಸೀಟುಗಳನ್ನು ತಲುಪಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ 20 ರಿಂದ 28 ಗೆಲ್ಲಬೇಕು ಎಂಬ ನಿರೀಕ್ಷೆ ಇತ್ತು. ಅಷ್ಟು ಸ್ಥಾನ ಬಂದಿಲ್ಲ. ನರೇಂದ್ರ ಮೋದಿ ಅವರಿಗೆ ಹಿನ್ನಡೆ ಆಗಲಿಲ್ಲವೇ? ಬಿಜೆಪಿಗೆ 60 ಸೀಟು ಕಡಿಮೆಯಾಗಿಲ್ಲವೇ ಎಂದು ಪ್ರಶ್ನಿಸಿದರು.
ವಾಲ್ಮೀಕಿ ನಿಗಮ ಹಗರಣ ಸಿಐಡಿ ತನಿಖೆ
ವಾಲ್ಮೀಕಿ ನಿಗಮದ ಹಗರಣ ಬಗ್ಗೆ ಸಿಐಡಿಯ ವಿಶೇಷ ತಂಡ ತನಿಖೆ ನಡೆಸುತ್ತಿದೆ. ಪ್ರಕರಣವು ಬ್ಯಾಂಕ್ ವಂಚನೆಯಾಗಿರುವುದರಿಂದ ನಿಯಮದ ಅನುಸಾರ ಮೂರು ಕೋಟಿಗೂ ಅಧಿಕ ವಂಚನೆ ಆಗಿದ್ದಲ್ಲಿ ಸ್ವಾಭಾವಿಕವಾಗಿ ಸಿಬಿಐ ತನಿಖೆ ನಡೆಸುತ್ತದೆ. ಈ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ಅಂತಿಮ ವರದಿಯನ್ನು ಕಾದು ನೋಡೋಣ ಎಂದರು.
ಭೋವಿ ನಿಗಮ ಹಗರಣ ಬಗ್ಗೆ ದೂರು ನೀಡಲಿ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭೋವಿ ನಿಗಮದಲ್ಲಿ 100 ಕೋಟಿ ಹಗರಣ ನಡೆದಿದೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಆರೋಪಿಸಿರುವ ಆಡಿಯೋ ಬಿಡುಗಡೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿದೆ ಅಂತ ಯಾರಾದರೂ ದೂರು ಕೊಟ್ಟರೆ ತನಿಖೆ ಮಾಡುತ್ತೇವೆ. ಗೂಳಿಹಟ್ಟಿ ಶೇಖರ್ ನಮಗೆ ದೂರು ಕೊಟ್ಟರೆ ಸಾಕು ತನಿಖೆ ಮಾಡ್ತೇವೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವೆ ಗೋ ಬ್ಯಾಕ್ ವಿಚಾರ
ಜಿಲ್ಲಾ ಸಚಿವರ ನೇಮಕ ಮಾಡುವುದು ಆಡಳಿತದ ದೃಷ್ಟಿಯಿಂದ ಹೊರತು ರಾಜಕೀಯದ ದೃಷ್ಟಿಯಿಂದ ಅಲ್ಲ. ಪಕ್ಷ ಸಂಘಟನೆಗೆ ನಮ್ಮಲ್ಲಿ ಜಿಲ್ಲಾ ಅಧ್ಯಕ್ಷ, ಕಾರ್ಯಾಧ್ಯಕ್ಷ, ಉಸ್ತುವಾರಿಗಳು ಇರುತ್ತಾರೆ. ಜಿಲ್ಲೆಯ ಆಡಳಿತ ಚುರುಕುಗೊಳಿಸುವುದು, ಸರ್ಕಾರದ ಕಾರ್ಯಕ್ರಮ ಅನುಷ್ಠಾನ ಉಸ್ತುವಾರಿ ಸಚಿವರ ಕೆಲಸ, ಅವರ ಬಗ್ಗೆ ಯಾವುದಾದರೂ ಅಸಮಧಾನಗಳಿದ್ದರೆ ಮುಖ್ಯಮಂತ್ರಿಗಳು ಗಮನ ಹರಿಸುತ್ತಾರೆ ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ
ರಾಜ್ಯದಲ್ಲಿ ಯಾವ ಕಾನೂನು ಸುವ್ಯವಸ್ಥೆಯೂ ಹಾಳಾಗಿಲ್ಲ. ಗಣೇಶ ಹಬ್ಬ, ರಂಜಾನ್ ಎಲ್ಲವೂ ಸುಖಕರವಾಗಿ ಮುಗಿದಿದೆ. ಸಾಮಾನ್ಯವಾಗಿ ಈ ವೇಳೆಯಲ್ಲಿ ಘಟನೆ ನಡೆಯುತ್ತಿತ್ತು. ರಾಜಕೀಯ ದೃಷ್ಟಿಯಿಂದ ಯಾವುದೇ ಕೊಲೆ ಆಗಿಲ್ಲ, ಕೊಲೆ, ಹೋರಾಟ ಏನು ಸಂಭವಿಸಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರದ ಅವಧಿಯ ಕೆಂ ರೇಟ್ ಅಂಕಿ ಸಂಖ್ಯೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು.