ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ತಾಲೂಕು ಕಸಾಪ ವತಿಯಿಂದ ಆಯೋಜಸಿದ್ದ ಮನೆಯೇ ಗ್ರಂಥಾಲಯ ಕಾರ್ಯಕ್ರಮಮದಲ್ಲಿ ಡಾ. ಹರೀಶ್ಚಂದ್ರ ಅವರಿಗೆ ಪ್ರೊ. ಮುರುಳೀಧರ ಉಪಾಧ್ಯ ವಿವಿಧ ಪುಸ್ತಕ ಹಸ್ತಾಂತರಿಸಿದರು. ಡಾ. ವ್ಯಾಸರಾಜ ತಂತ್ರಿ, ರವಿರಾಜ್​ ಎಚ್​.ಪಿ., ಡಾ. ರಾಜಲಕ್ಷ್ಮೀ, ಡಾ. ಆಮ್ನಾ ಹೆಗ್ಡೆ, ಜನಾರ್ದನ್​ ಕೊಡವೂರು ಇತರರಿದ್ದರು. 
ಜಿಲ್ಲೆ

ಪುಸ್ತಕಗಳು ರೋಗಿಗಳ ಜ್ಞಾನ ವೃದ್ಧಿಸುವ ಔಷಧವಾಗಲಿ

ಪ್ರೊ. ಮುರುಳೀಧರ ಉಪಾಧ್ಯ ಆಶಯ | 'ಮನೆಯೇ ಗ್ರಂಥಾಲಯ' ಉದ್ಘಾಟನೆ

ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಕಸಾಪ ತಾಲೂಕು ಘಟಕದ 50ನೇ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ
ಆಸ್ಪತ್ರೆಗಳಲ್ಲಿಯೂ ಗ್ರಂಥಾಲಯ ತೆರೆಯುವುದರಿಂದ ಕನ್ನಡ ಸಾಹಿತ್ಯದ ಹಿರಿಮೆ-ಗರಿಮೆ ವಿಸ್ತಾರಗೊಳ್ಳಲು ಪೂರಕವಾಗುತ್ತದೆ. ಆರೋಗ್ಯ ಚಿಕಿತ್ಸೆಗಾಗಿ ಬರುವ ರೋಗಿಗಳ ಮಸ್ತಕಕ್ಕೂ ಇಲ್ಲಿಯ ಪುಸ್ತಕಗಳು ಜ್ಞಾನ ವೃದ್ಧಿಸುವ ಔಷಧದಂತಾಗಲಿ ಎಂದು ಕನ್ನಡದ ಪ್ರಸಿದ್ಧ ವಿಮರ್ಶಕ ಪ್ರೊ. ಮುರುಳೀಧರ ಉಪಾಧ್ಯ ಹಿರಿಯಡ್ಕ ಆಶಯ ವ್ಯಕ್ತಪಡಿಸಿದರು.

ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ನಿಂದ ನಡೆಯುತ್ತಿರುವ ವಿನೂತನ ಮನೆಯೇ ಗ್ರಂಥಾಲಯದ ಸುವರ್ಣ ಸಂಭ್ರಮ (50ನೇ ಕಾರ್ಯಕ್ರಮ)ಕ್ಕೆ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರಿಗೆ ವಿವಿಧ ಪುಸ್ತಕ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯದ ಪುಸ್ತಕಗಳೇ ಇರಲಿ

ಕೆಟ್ಟಿರುವ ತಮ್ಮಆರೋಗ್ಯ ಸರಿಪಡಿಸಿಕೊಳ್ಳಲು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಕೆಲವೊಮ್ಮೆ ಗಂಟೆಗಟ್ಟಲೆ ಕಾಲ ಕುಳಿತುಕೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪುಸ್ತಕಗಳನ್ನು ಓದುವುದರಿಂದ ಸಮಯ ವ್ಯರ್ಥವಾಗದು. ಓದಿನಿಂದ ಆರೋಗ್ಯ ವೃದ್ಧಿಯೂ ಆಗುವುದರಿಂದ ಸಾಹಿತ್ಯ ಕೃತಿಗಳ ಜತೆಗೆ ರೋಗಿಗಳ ಮನಸ್ಥಿತಿಗೆ ಅನುಗುಣವಾಗಿ ವಿವಿಧ ರೀತಿಯ ಆರೋಗ್ಯ, ಸಾಮಾಜಿಕ ಹಾಗೂ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳು ಲಭಿಸುವಂತಾಗಲಿ ಎಂದರು.

ಸನ್ಮಾನ

ಆಸ್ಪತ್ರೆಯಲ್ಲಿ ಗ್ರಂಥಾಲಯ ತೆರೆಯಲು ಸ್ಥಳಾವಕಾಶ ಮಾಡಿಕೊಟ್ಟ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರೀಶ್ಚಂದ್ರ ಅವರನ್ನು ಕಸಾಪ ಉಡುಪಿ ತಾಲೂಕು ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ ಕರಾವಳಿ ಐಎಂಎ ಅಧ್ಯಕ್ಷೆ ಡಾ. ರಾಜಲಕ್ಷ್ಮೀ, ಕೋಶಾಧಿಕಾರಿ ಡಾ. ಆಮ್ನಾ ಹೆಗ್ಡೆ, ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ, ಕಸಾಪ ಉಡುಪಿ ತಾಲೂಕು ಘಟಕದ ಗೌ.ಕಾರ್ಯದರ್ಶಿಗಳಾದ ಜನಾರ್ದನ್​ ಕೊಡವೂರು, ರಂಜನಿ ವಸಂತ್​, ಖಜಾಂಚಿ ರಾಜೇಶ್​ ಭಟ್​ ಪಣಿಯಾಡಿ, ಪದ್ಮಾಸಿನಿ, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಸಂಧ್ಯಾ ಶೆಣೈ, ಸತೀಶ್​ ಕೊಡವೂರು, ಲಕ್ಷ್ಮೀ ಹರೀಶ್ಚಂದ್ರ, ಪಂಚಮಿ, ಹಫೀಜ್​ ರೆಹಮಾನ್​, ಸುಬೋಧ್​, ಶಶಿಕಾಂತ್​ ಶೆಟ್ಟಿ, ಪ್ರಭಾಕರ ಪೂಜಾರಿ ಇತರರು ಉಪಸ್ಥಿತರಿದ್ದರು.

ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್​ ನಿರೂಪಿಸಿದರು. ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.