ಜಿಲ್ಲೆ

ಗೃಹರಕ್ಷಕದಳ ಪ್ರವಾಹ ರಕ್ಷಣಾ ಕರ್ತವ್ಯಕ್ಕೆ ಮೂಲ ಸೌಲಭ್ಯ ಕೊರತೆ - ಸಲಕರಣೆ, ಸಿಬ್ಬಂದಿ ಕರೆದೊಯ್ಯಲು ವಾಹನವೇ ಇಲ್ಲ

ಮಂಗಳೂರು: ‘ನಿಷ್ಕಾಮ ಸೇವೆ’ ಧ್ಯೇಯ ಹೊಂದಿರುವ ಗೃಹರಕ್ಷಕದಳದ ದಕ್ಷಿಣ ಕನ್ನಡ ಜಿಲ್ಲಾ ಘಟಕದಲ್ಲಿ ಮಳೆಗಾಲದಲ್ಲಿ ಪ್ರವಾಹ ರಕ್ಷಣಾ ಕರ್ತವ್ಯ ನಿಭಾಯಿಸಲು ವಾಹನ ಸಹಿತ ಮೂಲ ಸೌಲಭ್ಯಗಳಿಲ್ಲದೆ ಹಲವು ಸಮಸ್ಯೆಗಳು ಎದುರಾಗಿದೆ.

ಭಾರಿ ಮಳೆ, ನೆರೆ ಸಹಿತ ವಿಪತ್ತಿನ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರ ಸಹಾಯಕ್ಕೆ ಧಾವಿಸುವವರಲ್ಲಿ ಗೃಹ ರಕ್ಷಕ ಸಿಬಂದಿಯೂ ಸೇರಿದ್ದಾರೆ. ಆದರೆ, ಈ ಬಾರಿ ದ.ಕ. ಜಿಲ್ಲಾ ಗೃಹ ರಕ್ಷಕ ದಳದಲ್ಲಿ ಸಮಾದೇಷ್ಟರು, ಉಪಸಮಾದೇಷ್ಟರು ಸಹಿತ ಹಲವು ಪ್ರಮುಖ ಹುದ್ದೆಗಳೇ ಖಾಲಿ ಇವೆ. ಜಿಲ್ಲಾ ಹೆಚ್ಚುವರಿ ಎಸ್ಪಿ ಪ್ರಭಾರ ಸಮಾದೇಷ್ಟ ಹುದ್ದೆಯಲ್ಲಿದ್ದು, ಅವರಿಗೆ ಪೊಲೀಸ್ ಇಲಾಖೆಯ ಕರ್ತವ್ಯದ ಒತ್ತಡದ ಜತೆ ಇಲ್ಲಿಯೂ ಕೆಲಸ ಮಾಡುವುದು ಸವಾಲಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ಮಳೆಗಾಲದ ಪರಿಸ್ಥಿತಿ ಎದುರಿಸಲು ಸಿಬ್ಬಂದಿಗೆ ತರಬೇತಿ ನೀಡಿ, ಎಲ್ಲಾ ಸಲಕರಣೆಗಳನ್ನು ಸಿದ್ಧಪಡಿಸಿ ಸನ್ನದ್ಧ ಸ್ಥಿತಿಯಲ್ಲಿಡಲಾಗುತ್ತಿತ್ತು. ಈ ಬಾರಿ ಇಲಾಖೆಗೆ ಸಮರ್ಥ ಸಾರಥಿ ಇಲ್ಲದೆ ಇರುವುದರಿಂದ ಗೊಂದಲ ಉಂಟಾಗಿದೆ. ಮಳೆಗಾಲದ ಆರಂಭದಲ್ಲೇ ಮಂಗಳೂರಿನ ಹಲವು ಕಡೆ ನೆರೆ ಬಂದು ಮುಳುಗಡೆಯಾದಾಗ ಗೃಹರಕ್ಷಕದಳದ ಸಿಬ್ಬಂದಿಯನ್ನು ಕಾರ್ಯಾಚರಣೆಗೆ ನಿಯೋಜಿಸಿಲ್ಲ.

ವಾಹನ ಇಲ್ಲ: ತುರ್ತು ಕಾರ್ಯಾಚರಣೆಗೆ ಸಿಬ್ಬಂದಿಗೆ ಸ್ಥಳಕ್ಕೆ ತಮ್ಮ ಸಲಕರಣೆಗಳೊಂದಿಗೆ ಕ್ಲಪ್ತ ಸಮಯಕ್ಕೆ ತಲುಪಲು ವಾಹನ ವ್ಯವಸ್ಥೆ ಅವಶ್ಯ. ಜಿಲ್ಲಾ ಕಚೇರಿಯಲ್ಲಿದ್ದ ಒಂದು ಜೀಪು ಮತ್ತು ಎರಡು ಮಿನಿ ಬಸ್ ಕೇಂದ್ರ ಕಚೇರಿಗೆ ಹೋಗಿವೆ. ರಬ್ಬರ್ ಬೋಟ್, ಅಸ್ಕಾ ಲೈಟ್, ಸ್ಟ್ರೆಚರ್‌ಗಳು ಸಹಿತ ತುರ್ತು ಕಾರ್ಯಾಚರಣೆಗೆ ಅಗತ್ಯವಿರುವ ಸಲಕರಣೆಗಳಿದ್ದರೂ, ಅವುಗಳನ್ನು ಕಾರ್ಯಾಚರಣೆಗೆ ಸಿದ್ದಪಡಿಸಿಲ್ಲ. ಪ್ರತಿ ವರ್ಷ ನೆರೆ ಬಂದಾಗ ನಿವಾಸಿಗಳನ್ನು, ಸಾಮಗ್ರಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುವುದು, ಸಮುದ್ರ ತೀರದಲ್ಲಿ ರಕ್ಷಣೆ ಮೊದಲಾದ ಕಾರ್ಯಗಳನ್ನು ಗೃಹರಕ್ಷಕ ದಳ ನಿಭಾಯಿಸುತ್ತಿದೆ.

ಸಾಮಾನ್ಯವಾಗಿ ಜಿಲ್ಲೆಯ ಎಲ್ಲಾ 11 ಘಟಕಗಳಿಂದ ಮಳೆಗಾಲ ಪೂರ್ವದಲ್ಲಿಯೇ ‘ಪ್ರವಾಹ ರಕ್ಷಣಾ ಕರ್ತವ್ಯ’ಕ್ಕೆ ನಿಗದಿತ ಸಂಖ್ಯೆಯ ಸಿಬಂದಿಯನ್ನು ನಿಯೋಜಿಸಲಾಗುತ್ತದೆ. ಈ ಬಾರಿ ಮೇ 31ರಂದು ಈ ಆದೇಶವನ್ನು ಹೊರಡಿಸಲಾಗಿದೆ. ಒಟ್ಟು 80 ಮಂದಿಯನ್ನು ನಿಯೋಜಿಸಲಾಗಿದೆ.

ಗೃಹರಕ್ಷಕರ ಸಂಖ್ಯೆ ಇಳಿಕೆ

ಮಂಗಳೂರು ಘಟಕದಲ್ಲಿ ಗೃಹರಕ್ಷಕ ದಳಕ್ಕೆ ಸಿಬಂದಿಯ ಕೊರತೆಯೂ ಎದುರಾಗುತ್ತಿದೆ. ಇರುವ ಸಿಬಂದಿ ಪೊಲೀಸ್, ಆರ್‌ಟಿಒ, ಕಾರಾಗೃಹ ಸಹಿತ ಬೇರೆ ಇಲಾಖೆಗಳ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಒಟ್ಟು ಗೃಹರಕ್ಷಕರ ಸಂಖ್ಯೆ 150ರಿಂದ 80ಕ್ಕೆ ಇಳಿಕೆಯಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲೂ ಗೃಹರಕ್ಷಕರ ಸಂಖ್ಯೆ ಕಡಿಮೆಯಾಗಿದೆ.

ಸಾರಥಿ - ಸೌಲಭ್ಯ ಇಲ್ಲ

ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಕಮಾಂಡೆಂಟ್ ಆಗಿದ್ದ ಡಾ.ಮುರಲಿ ಮೋಹನ ಚೂಂತಾರು ನಿವೃತ್ತಿಯಾಗಿ ಐದು ತಿಂಗಳು ಕಳೆದರೂ ಹೊಸ ಸಮಾದೇಷ್ಟರ ಆಯ್ಕೆ ನಡೆದಿಲ್ಲ. ಸರ್ಕಾರದಿಂದ ನೇಮಕವಾಗಬೇಕಾದ ಉಪಸಮಾದೇಷ್ಟರ ಹುದ್ದೆ ಎರಡು ವರ್ಷಗಳಿಂದ ಖಾಲಿ ಇದೆ. ಮಂಗಳೂರಿನಲ್ಲಿ ಯುನಿಟ್ ಆಫೀಸರ್(ಪಿಎಲ್‌ಸಿ) ಇಲ್ಲ, ಬೋಧಕರಿಲ್ಲ. ಸಾರ್ಜೆಂಟ್‌ಗಳ ಕೊರತೆಯೂ ಇದೆ.