ಮಂಗಳೂರು: ನಿರಂತರವಾಗಿ ಪರಿಸರದ ಮೇಲೆ ಉಂಟಾಗುತ್ತಿರುವ ದೌರ್ಜನ್ಯದಿಂದಾಗಿ ಪರಿಸರದಲ್ಲಿ ಬದುಕು ಕಟ್ಟಿಕೊಂಡಿರುವ ಜೀವ ಸಂಕುಲಗಳು ನಾಶವಾಗಿ, ಪರಿಸರದ ಸಮತೋಲನ ತಪ್ಪಿ ಹೋಗುತ್ತಿದೆ. ಜೈವಿಕ ಸರಪಳಿ ನಾಶವಾಗದಂತೆ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಮೂಲ್ಕಿಯ ಗೃಹರಕ್ಷಕ ದಳ ಕಛೇರಿ ಆವರಣದಲ್ಲಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವಾರು ವಿರಳ ಗಿಡಸಸ್ಯಗಳು ಮತ್ತು ಪ್ರಾಣಿ ಸಂಕುಲಗಳು ನಾಶವಾಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲಾ ಕೂಡಲೇ ಎಚ್ಚೆತ್ತುಕೊಂಡು ಗಿಡಗಳನ್ನು ನೆಟ್ಟು ಮರಗಳನ್ನು ಪೋಷಿಸಿ ಪರಿಸರವನ್ನು ರಕ್ಷಿಸಬೇಕು. ಹಾಗಾದರೆ ಮಾತ್ರ ನಾಡು ಸಮೃದ್ಧವಾಗಿ ಕಾಲಕಾಲಕ್ಕೆ ಮಳೆ, ಬಿಸಿಲು ಸರಿಯಾಗಿ ದೊರಕಿ, ಪರಿಸರ ಮಾಲಿನ್ಯ ನಿವಾರಣೆಯಾಗಿ ಹಾಗೂ ಪರಿಸರ ನಾಶವಾಗುವುದು ತಪ್ಪಿ ಹೋಗಿ ಸುದೃಢ, ಸುಭೀಕ್ಷ ನಾಡು ನಿರ್ಮಾಣವಾಗಬಹುದು ಎಂದರು.
ಈ ಸಂದರ್ಭದಲ್ಲಿ ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಹಾಗೂ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು.