ಮೈಸೂರು: ಸಮಾಜದ ರಕ್ಷಣೆ ಮಾಡುವಲ್ಲಿ ಗೃಹರಕ್ಷಕ ದಳದವರ ಪ್ರಮುಖ ಪಾತ್ರವಿದ್ದು, ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಗೃಹರಕ್ಷಕ ದಳದ ಗೌರವ ಸಮಾದೇಷ್ಠ (ಕಮಾಂಡೆಂಟ್) ಡಾ.ಎಂ.ಕಾಂತರಾಜು ಹೇಳಿದರು.
ಜಿಲ್ಲಾ ಗೃಹರಕ್ಷಕ ದಳದಿಂದ ಮಂಗಳವಾರ ನಗರದಲ್ಲಿ ಆಯೋಜಿಸಿರುವ 10 ದಿನಗಳ ಗೃಹರಕ್ಷಕರ ಮೂಲ ತರಬೇತಿ ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಪೊಲೀಸರಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಗೃಹ ರಕ್ಷಕರು, ಸಮಾಜ ರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯಾವುದೇ ವೇತನ ಇಲ್ಲದೆ ಸೇವಾಭಾವನೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಅವರ ಜವಾಬ್ದಾರಿಯೂ ಇದೆ ಎಂದರು.
ಜಿಲ್ಲೆಗೆ 1300 ಗೃಹರಕ್ಷಕರನ್ನು ನಿಯೋಜಿಸಿಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನಾನಾ ಕಾರಣಗಳಿಂದ 217 ಸ್ಥಾನಗಳು ಖಾಲಿ ಇದ್ದು, ಸಂದರ್ಶನ, ದೈಹಿಕ ಪರೀಕ್ಷೆ ಮೂಲಕ ಈಗ 204 ಸ್ಥಾನ ತುಂಬಲಾಗಿದೆ. ಯಾವುದೇ ಶಿಫಾರಸು ಇಲ್ಲದೆ, ದೈಹಿಕ ಸಾಮರ್ಥ್ಯದ ಮೇಲೆ ಆಯ್ಕೆಯಾಗಿರುವವರಿಗೆ ಈಗ ಬುನಾದಿ ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಯಾವುದೇ ವೇತನ ಇಲ್ಲದಿದ್ದರೂ, ಸರ್ಕಾರ ಗೌರವ ಧನ ನೀಡುತ್ತಿದೆ. ಹೀಗಾಗಿ ಎಲ್ಲ ಗೃಹ ರಕ್ಷಕರಿಗೂ ವಿವಿಧ ಇಲಾಖೆಗೆ ನಿಯೋಜಿಸುವ ಮೂಲಕ 8 ತಿಂಗಳ ಕಾಲ ಕೆಲಸ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಡಿಎಆರ್ ಇನ್ಸ್‌ಪೆಕ್ಟರ್ ಎಚ್.ವಿ.ದೇವಿಪ್ರಸಾದ್ ಮಾತನಾಡಿ, ಗೃಹರಕ್ಷಕ ದಳದವರಿಗೆ ಸಾಮಾಜಿಕ ಕಳಕಳಿ ಇರಬೇಕು. ಸಮರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಲು ಗೃಹರಕ್ಷಕ ದಳ ಉತ್ತಮ ವೇದಿಕೆಯಾಗಿದ್ದು, ಈ ಅವಕಾಶವನ್ನು ತರಬೇತಿಗೆ ಆಯ್ಕೆಯಾಗಿರುವ ಶಿಬಿರಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರದ 57 ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಗೃಹರಕ್ಷಕ ದಳದವರಿಗೆ ಅವಕಾಶ ಸಿಗಲಿದ್ದು, ಈ ಮೂಲಕ ಸರ್ಕಾರದೊಂದಿಗೆ ಸಮಾಜ ಸೇವೆ ಕೂಡ ಮಾಡಬಹುದು ಎಂದರು.
ಮೂಲ ತರಬೇತಿ ಶಿಬಿರದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸೂಕ್ತ ತರಬೇತಿಯನ್ನು ಪೊಲೀಸ್ ಇಲಾಖೆಯಿಂದ ನೀಡಲಾಗುತ್ತದೆ ಎಂದು ಹೇಳಿದರು.
ಸಹಾಯಕ ಆಡಳಿತಾಧಿಕಾರಿ ಮಲ್ಲಿಕಾರ್ಜುನ್ ಎಂ. ನಾಲತ್‌ವಾಡ್, ಉಪ ಕಮಾಂಡೆಂಟ್ ಎಸ್.ಆರ್. ಗಾಯಕ್ವಾಡ್, ಬೋಧಕರಾದ ಎಂ.ಆರ್. ಚಂದನ್, ಎಸ್. ಮಂಜುನಾಥ್ ಇದ್ದರು.