ಮಂಗಳೂರು: ಗೃಹರಕ್ಷಕದಳದಲ್ಲಿ ಸುದೀರ್ಘ 36 ವರ್ಷಗಳ ಕಾಲ ಸುದೀರ್ಘ ಸೇವೆ ಮಾಡಲು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಹಿಡಿದು ಕಚೇರಿ ಸಿಬ್ಬಂದಿ ತನಕ ನೀಡಿದ ಸಹಕಾರದಿಂದ ಸಾಧ್ಯವಾಗಿದೆ ಎಂದು ಸೇವೆಯಿಂದ ನಿವೃತ್ತಗೊಂಡ ಉಪ ಸಮಾದೇಷ್ಟ ರಮೇಶ್ ಹೇಳಿದರು.
ದ.ಕ.ಜಿಲ್ಲಾ ಗೃಹ ರಕ್ಷಕ ದಳದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಸಮಾದೇಷ್ಟರಿಂದ, ಎಲ್ಲಾ ಘಟಕಗಳಿಂದ ಉತ್ತಮ ಸಹಕಾರ ಲಭಿಸಿದೆ. ಇದರಿಂದ ರಾಷ್ಟ್ರಪತಿ ಪುರಸ್ಕಾರ ಕೂಡಾ ಪಡೆಯಲು ಸಾಧ್ಯವಾಯಿತು ಎಂದವರು ಹೇಳಿದರು.
ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಅಧ್ಯಕ್ಷತೆ ವಹಿಸಿದ್ದರು. ಇಲಾಖೆಯ ಎಲ್ಲಾ ಕೆಲಸಗಳನ್ನು ನಿಭಾಯಿಸಿ, ರಮೇಶ್ ಒಳ್ಳೆಯ ಸಹಕಾರವನ್ನು ನೀಡಿದ್ದಾರೆ. ಅವರು ತುಂಬಾ ಅನುಭವಿ, ಇಲಾಖೆಗೆ ಅವರ ಕೊರತೆ ಕಾಡಲಿದೆ, ಅನುಭವದ ಮಾರ್ಗದರ್ಶನ ಸದಾ ಇರಲಿ, ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.
ನಿವೃತ್ತ ಉಪಸಮಾದೇಷ್ಟರಾದ ಪುರುಷೋತ್ತಮ, ಜಯರಾಮ, ನಿವೃತ್ತ ಭೋದಕ ರಾಮಕೃಷ್ಣ, ವಕೀಲ ಸಂತೋಷ್ ಪೀಟರ್ ಡಿಸೋಜ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಸೇವಾ ನಿವೃತ್ತಿ ಪಡೆಯುತ್ತಿರುವ ರಮೇಶ್ ರವರಿಗೆ ಶುಭಹಾರೈಸಿದರು.
ಗೃಹರಕ್ಷಕ ದಳದ ಘಟಕಾಧಿಕಾರಿಗಳು, ಸಿಬ್ಬಂದಿಗಳು ರಮೇಶ್ ರವರ ಸೇವಾ ಬದುಕಿನ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ವಿಟ್ಲ ಘಟಕದ ಗೃಹರಕ್ಷಕ ಸಿಬ್ಬಂದಿ ಉಷಾ ಎಸ್.ಶೆಟ್ಟಿ ಪ್ರಾರ್ಥಿಸಿದರು. ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ ಸ್ವಾಗತಿಸಿ, ನಿರೂಪಿಸಿದರು.
ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲ ವಂದಿಸಿದರು.