ನರಗುಂದ: ಗೃಹರಕ್ಷಕ ದಳ ನಿಸ್ವಾರ್ಥದಿಂದ ಜನ ಸೇವೆಯಲ್ಲಿ ತೊಡಗಿದೆ. ಆಪತ್ಕಾಲೀನ ಸಂದರ್ಭಗಳಲ್ಲೂ ಸರ್ಕಾರ ಹಾಗೂ ಜನಸಾಮಾನ್ಯರ ಕೊಂಡಿಯಾಗಿ ಕೆಲಸ ಮಾಡುತ್ತಿದೆ ಎಂದು ಗೃಹರಕ್ಷಕ ದಳದ ನರಗುಂದ ಘಟಕಾಧಿಕಾರಿ ಡಿ.ಎಂ. ಈಟಿ ಹೇಳಿದರು.
ಪಟ್ಟಣದ ಗೃಹರಕ್ಷಕ ದಳದ ಕಚೇರಿಯಲ್ಲಿ ಮಂಗಳವಾರ ಪುನರ್ ಮನನ ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಬ್ಬಂದಿ ಬಸವರಾಜ ತಿಮ್ಮಾಪೂರ ಅವರನ್ನು ಸನ್ಮಾನಿಸಿ ಮಾತನಾಡಿದರು.
ಗೃಹರಕ್ಷಕ ದಳದ ಬಗ್ಗೆ ಯುವಜನತೆ ಹೆಚ್ಚಿನ ಆಸಕ್ತಿ ವಹಿಸಬೇಕು. ಸಮಾಜ ಸೇವೆಗೆ ರೂಪುಗೊಂಡಿರುವ ಅತ್ಯುತ್ತಮ ದಳವೆಂದರೆ ಅದು ಗೃಹರಕ್ಷಕ ದಳ. ಪ್ರಕೃತಿ ವಿಕೋಪ, ಆಪತ್ತಿನ ಸಂದರ್ಭ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಗೃಹರಕ್ಷಕರು ಸದಾ ಸನ್ನದ್ಧರಾಗಿರಬೇಕು. ನಿಸ್ವಾರ್ಥ ಸೇವೆ ಸಲ್ಲಿಸಲು ಇಲ್ಲಿನ ದಳಕ್ಕೆ ಇತ್ತೀಚೆಗೆ ಹೆಚ್ಚಿನ ಸಂಖ್ಯೆಯ ಯುವಕರು ಆಗಮಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಶಿಸ್ತು, ಸಂಯಮದಿಂದ ಸಮಾಜ ಸೇವೆಗೆ ಅಣಿಯಾಗುವ ಗೃಹರಕ್ಷಕ ದಳದವರಿಗೆ ನೀಡಲಾಗುವ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತದೆ. ಬೆಂಗಳೂರು, ಬಳ್ಳಾರಿ ಮುಂತಾದೆಡೆ ಹಮ್ಮಿಕೊಂಡಿದ್ದ ಪುನರ್ ಮನನ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನರಗುಂದ ಗೃಹರಕ್ಷಕ ದಳದ ಸಿಬ್ಬಂದಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಇಲಾಖೆ ಅಧಿಕಾರಿಗಳು ನೀಡುವ ವಿವಿಧ ಸಲಹೆ, ಸೂಚನೆಗಳನ್ನು ಘಟಕದ ಎಲ್ಲ ಸಿಬ್ಬಂದಿ ಪಾಲಿಸುವಂತಾಗಬೇಕು ಎಂದರು.
ಗೃಹರಕ್ಷಕ ಸಿಬ್ಬಂದಿ ಲಕ್ಷ್ಮಣ ಚಲವಾದಿ, ಬಿ.ಆರ್. ಸುರೇಬಾನ, ಎಫ್.ಎನ್. ಸನ್ನಿ, ಆರ್.ಎಸ್. ಹಟ್ಟಿ, ಎಸ್.ಬಿ. ಪಟ್ಟಣದ, ಎಫ್.ವೈ. ಕೀಲಿಕೈ, ವಿ.ಟಿ. ಬರಗಿ, ಐ.ಡಿ. ಗೊಂಬಿ, ಸಿ.ಎ. ಚಪ್ಪಳಗಾವಿ, ಎಂ.ಎಂ. ಬಡಿಗೇರ, ಎಂ.ಎನ್. ಕುಂಬಾರ, ಪಿ.ಎಚ್. ಬನೋಜರ, ಎಸ್.ಎನ್. ಕೋಣನ್ನವರ, ವೈ.ಎಸ್. ಲೆಂಗೆ, ಎ.ವಿ. ಗುಗ್ಗರಿ, ಕೆ.ಎಚ್. ಬನೋಜರ, ಪಿ.ಬಿ. ನರಗುಂದ, ವಿ.ಬಿ. ವಡ್ಡರ, ಕೆ.ಎಚ್. ಗುಗ್ಗರಿ, ಎಸ್.ಎಂ. ಜಿಗಳೂರ ಉಪಸ್ಥಿತರಿದ್ದರು.