ಮೈಸೂರು: ಸಾರ್ವಜನಿಕ ಸೇವೆಯಲ್ಲಿ ಶಿಸ್ತು, ಸಭ್ಯತೆ ಹಾಗೂ ಸಮರ್ಪಣಾ ಮನೋಭಾವ ಬಹಳ ಮುಖ್ಯ. ಶ್ರದ್ಧೆಯಿಂದ ಕೆಲಸ ಮಾಡಿದಷ್ಟೂ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಎನ್. ನಂದಿನಿ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಗೃಹರಕ್ಷಕ ದಳದಿಂದ ನಗರದ ಜ್ಯೋತಿನಗರ ಡಿಎಆರ್ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗೃಹ ರಕ್ಷಕರ ಮೂಲ ತರಬೇತಿ ಶಿಬಿರದ ಮೊದಲನೇ ತಂಡದ ಸಮಾರೋಪ ಹಾಗೂ ಎರಡನೇ ತಂಡದ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗೃಹರಕ್ಷಕ ದಳವು ಪೊಲೀಸ್ ಇಲಾಖೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದೆ. ಅಗ್ನಿಶಾಮಕ, ಗೃಹ ರಕ್ಷಕ ಇಲಾಖೆ ಹಾಗೂ ನಾಗರಿಕ ರಕ್ಷಣಾ ಸೇವೆ(ಸಿವಿಲ್ ಡಿಫೆನ್ಸ್ ಸರ್ವೀಸ್) ಘಟಕಗಳ ಸೇವೆ ಮಹತ್ವದ್ದಾಗಿದೆ ಎಂದರು.
ಸಾರ್ವಜನಿಕ ಸೇವೆಯಲ್ಲಿ ಶಿಸ್ತು, ಸಭ್ಯತೆ ಹಾಗೂ ಸಮರ್ಪಣಾ ಮನೋಭಾವ ಬಹಳ ಮುಖ್ಯ. ಶ್ರದ್ಧೆಯಿಂದ ಕೆಲಸ ಮಾಡುವ ಜತೆಗೆ ನೀವು ಮಾಡುವ ಕಾರ್ಯ ನಿಮಗೆ ಆತ್ಮತೃಪ್ತಿ ತರುವಂತಿರಬೇಕು ಎಂದು ಹೇಳಿದರು.
ಪೊಲೀಸ್, ಗೃಹ ರಕ್ಷಕ ದಳ ಸೇರಿದಂತೆ ಎಲ್ಲ ಸೇವಾ ಘಟಕದವರು ಧರಿಸುವುದು ಖಾಕಿ ಸಮವಸ್ತ್ರವನ್ನೆ. ಇಲಾಖೆ ಯಾವುದೆ ಇರಲಿ, ವೈಯಕ್ತಿಕ ಹಾಗೂ ಇಲಾಖೆ ಗೌರವವು ನಮ್ಮ ಕಾರ್ಯ ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಸಾರ್ವಜನಿಕ ಸೇವೆಯಲ್ಲಿ ಶಿಸ್ತು, ಸಭ್ಯತೆ ಹಾಗೂ ಸಮರ್ಪಣಾ ಮನೋಭಾವ ಬಹಳ ಮುಖ್ಯ. ಶ್ರದ್ಧೆಯಿಂದ ಕೆಲಸ ಮಾಡಿದಷ್ಟೂ ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸೇವೆಯಲ್ಲಿ ಆತ್ಮತೃಪ್ತಿ ಗಳಿಸಿಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಸೇವೆಯಲ್ಲಿ ನಮ್ಮ ನಡೆ-ನುಡಿಯನ್ನು ಜನ ಗಮನಿಸುತ್ತಾರೆ. ತುಂಬಾ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸಣ್ಣ ವ್ಯತ್ಯಾಸವಾದರೂ ಸಾಮಾಜಿಕ ಜಾಲತಾಣದ ಮೂಲಕ ದೊಡ್ಡದಾಗುವ ಸಾಧ್ಯತೆ ಇರುತ್ತದೆ. ಯಾವುದೋ ಆಮಿಷ ಅಥವಾ ಸಣ್ಣಪುಟ್ಟ ವಿಚಾರಕ್ಕೆ ಒಳಗಾಗಿ ಗೌರವ ಕಳೆದುಕೊಳ್ಳಬಾರದು. ಸಮವಸ್ತ್ರದ ಘನತೆ ಕಾಪಾಡಿಕೊಳ್ಳಬೇಕು. ಇದರಿಂದ ನಿಮ್ಮ ಕುಟುಂಬವೂ ಹೆಮ್ಮೆಪಡುತ್ತದೆ ಎಂದರು.
ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯಂತೆ ಎಲ್ಲರೂ ಒಂದೇ ಎಂಬ ಭಾವನೆ ಗಟ್ಟಿಯಾಗಿರಬೇಕು. ಜಾತಿ, ಮತ ನಿಮ್ಮಗಳ ಮಧ್ಯೆ ಬರಬಾರದು. ಅದು ಸಮಾಜಕ್ಕೆ ಮಾರಕ ಎಂಬುದನ್ನು ಮರೆಯಬಾರದು. ಸೇವೆಯಲ್ಲಿ ಮಾನವೀಯತೆ, ದೃಢ ನಿರ್ಧಾರ, ಸಮಯಪ್ರಜ್ಞೆ, ಆತ್ಮವಿಶ್ವಾಸ ಇರಬೇಕು ಎಂದು ತಿಳಿಸಿದರು.
ಇದೇ ವೇಳೆ ಗೃಹ ರಕ್ಷಕರಾಗಿ ನೇಮಕಗೊಂಡು ಮೊದಲ ಬ್ಯಾಚ್‌ನಲ್ಲಿ ತರಬೇತಿ ಪಡೆದಿರುವ 147 ಜನರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಎರಡನೇ ಬ್ಯಾಚ್‌ನಲ್ಲಿ ಶಿಬಿರಕ್ಕೆ ಆಗಮಿಸಿದ 142 ಜನರನ್ನು ಸ್ವಾಗತಿಸಲಾಯಿತು.
ಸಾಹಿತಿ ಪ್ರೊ.ಎನ್.ಆರ್.ಶಿವರಾಂ, ಜಿಲ್ಲಾ ಗೃಹ ರಕ್ಷಕ ದಳದ ಗೌರವ ಕಮಾಂಡೆಂಟ್ (ಗೌರವ ಸಮಾದೇಷ್ಟರು) ಡಾ.ಎಂ.ಕಾಂತರಾಜು, ಬೋಧಕ ಎಂ.ಆರ್.ಚಂದನ್, ಸಹಾಯಕ ಬೋಧಕ ಎಸ್.ಮಂಜುನಾಥ್, ಸಹಾಯಕ ಆಡಳಿತಾಧಿಕಾರಿ ಎಂ.ಎನ್.ವಿಶ್ವನಾಥ, ಘಟಕಾಧಿಕಾರಿಗಳು ಇದ್ದರು.