ಬಾಳೆಹೊನ್ನೂರು: ಹೋಬಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಕ್ರವಾರ ಆಶ್ಲೇಷ ಮಳೆ ಅಬ್ಬರ ಮುಂದುವರಿದು, ನಿರಂತರ ಮಳೆಯಿಂದ ಭದ್ರಾನದಿ ಪ್ರವಾಹದಿಂದ ಸಾವಿರಾರು ಎಕರೆ ಜಮೀನು ಜಲಾವೃತವಾಗಿವೆ.
ಗುರುವಾರ ರಾತ್ರಿ ಬಿರುಸುಗೊಂಡಿದ್ದ ಮಳೆ ಶುಕ್ರವಾರ ಬೆಳಗ್ಗೆ ಕಡಿಮೆಯಾದರೂ ಮಧ್ಯಾಹ್ನ ಮತ್ತೆ ಧಾರಾಕಾರ ಸುರಿಯತು. ಬಾಳೆಹೊನ್ನೂರು, ಕಳಸ, ಕುದುರೆಮುಖದಲ್ಲಿ ಮಳೆಯಿಂದ ಬಾಳೆಹೊನ್ನೂರು-ಕಳಸ-ಹೊರನಾಡು-ಕೊಟ್ಟಿಗೆಹಾರ ಸಂಪರ್ಕ ಕಲ್ಪಿಸುವ ಬೈರೇಗುಡ್ಡ ಸಮೀಪದ ಮುಖ್ಯ ರಸ್ತೆಯಲ್ಲಿ ನೀರು ಹರಿದು ಬನ್ನೂರು, ಮಾಗುಂಡಿ, ಜಕ್ಕಣಕ್ಕಿ ಮುಂತಾದ ಕಡೆಗಳಿಗೆ ಸಂಪರ್ಕ ಕಡಿತಗೊಂಡಿದೆ.
ಭದ್ರಾನದಿ ಹಾಗೂ ಡೋಬಿ ಹಳ್ಳದಲ್ಲಿ ಪ್ರವಾಹದಿಂದ ಎನ್.ಆರ್.ಪುರ ರಸ್ತೆಯ ಕೆಲವು ಅಂಗಡಿ, ಗ್ಯಾರೇಜ್, ಹಲವು ಮನೆಗಳಿಗೆ ನೀರು ನುಗ್ಗಿ ಜಲಾವೃತಗೊಂಡಿವೆ. ಪ್ರವಾಹ ಭೀತಿಯಿಂದ ಕೆಲವು ಅಂಗಡಿ ಮಾಲೀಕರು ಸಾಮಾನುಗಳನ್ನು ಖಾಲಿ ಮಾಡಿದ್ದಾರೆ. ಸಂತೆ ಮಾರುಕಟ್ಟೆ ಸಂಕೀರ್ಣ ಇಂದೂ ಸಂಪೂರ್ಣವಾಗಿ ಮುಳುಗಡೆಯಾಗಿತ್ತು.
ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ಮತ್ತು ತುರ್ತಸೇವೆಗಳ ತಂಡದ ಸಿಬ್ಬಂದಿ ಪಟ್ಟಣದಲ್ಲಿಯೇ ಮೊಕ್ಕಾಂ ಹೂಡಿ ಪರಿಸ್ಥಿತಿ ಎದುರಿಸಲು ಸನ್ನದವಾಗಿದ್ದಾರೆ.