ಜಿಲ್ಲೆ

ಮನೆ ನಿರ್ಮಾಣಕ್ಕೆ ತಂತ್ರಾಂಶ ಅಡ್ಡಿ

Belagavi

ಬೆಳಗಾವಿ : ಪ್ರವಾಹ, ಅತಿವೃಷ್ಟಿಯಿಂದ ಮನೆ ಕಳೆದುಕೊಂಡು ಮೊದಲೇ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಇದೀಗ ಪರಿಹಾರ ಪಡೆಯಲು ರಾಜೀವ ಗಾಂಧಿ ವಸತಿ ನಿಗಮದ ತಂತ್ರಾಂಶ ಅಡ್ಡಿಯಾಗಿದೆ. ಮನೆ ನಿರ್ಮಾಣದ ಸ್ಥಳ, ದಾಖಲೆಗಳು ಒಂದಕ್ಕೊಂದು ಹೊಂದಾಣಿಕೆಯೂ ಆಗದೆ ಲಾನುಭವಿಗಳು ಮನೆ ನಿರ್ಮಿಸಿಕೊಳ್ಳಲಾಗದೆ ಪರದಾಡುವಂತಾಗಿದೆ.

ಕಳೆದ ವರ್ಷ ಅತಿವೃಷ್ಟಿಯಿಂದಾಗಿ ಗೋಕಾಕ, ಅಥಣಿ, ಚಿಕ್ಕೋಡಿ, ರಾಮದುರ್ಗ, ಸವದತ್ತಿ, ಬೆಳಗಾವಿ, ಹುಕ್ಕೇರಿ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಎ,ಬಿ ಮತ್ತು ಸಿ ಕೆಟಗರಿಯ ಒಟ್ಟು 53,248 ಮನೆಗಳು ಹಾನಿಯಾಗಿದ್ದವು. ಅದರಲ್ಲಿ 44,156 ಫಲಾನುಭವಿಗಳಿಗೆ ಇಲ್ಲಿಯವರೆಗೆ 488.74 ಕೋಟಿ ರೂ. ಪರಿಹಾರ ವಿತರಣೆ ಆಗಿದೆ. ಬಾಕಿ ಉಳಿದಿರುವ 9,092 ಮನೆಗಳ ದಾಖಲೆಗಳು ಇದೀಗ ತಂತ್ರಾಂಶದಲ್ಲಿ ದಾಖಲಾಗುತ್ತಿಲ್ಲ.

ಸ್ಥಳ ಗೊಂದಲ: ಪ್ರವಾಹದಿಂದ ಮನೆ ಕಳೆದುಕೊಂಡವರು ಸರ್ಕಾರ ನೀಡುವ ಪರಿಹಾರ ಹಣದಲ್ಲಿ ತಮ್ಮ ಕೃಷಿ ಜಮೀನುಗಳಲ್ಲಿ, ಕೆಲ ಕೂಲಿ ಕಾರ್ಮಿಕರು ಹಾಗೂ ಬಡವರು ಸರ್ಕಾರಿ ಗೋಮಾಳದ ಜಾಗದಲ್ಲಿ ಕಟ್ಟಿಕೊಳ್ಳಲು ಅರ್ಜಿ ಹಾಕಿದ್ದಾರೆ. ಹೀಗಾಗಿ ರಾಜೀವ ಗಾಂಧಿ ವಸತಿ ನಿಗಮದ ತಂತ್ರಾಂಶದಲ್ಲಿ ಈ ಸ್ಥಳಗಳಲ್ಲಿ ಮನೆ ನಿರ್ಮಿಸಿಕೊಳ್ಳುವವರು ನೀಡಿದ ದಾಖಲೆಗಳು ದಾಖಲಾಗುತ್ತಿಲ್ಲ. ಮನೆ ನಿರ್ಮಾಣದ ಸ್ಥಳಗಳನ್ನು ಜಿಪಿಎಸ್ ಮಾಡುವಾಗ ಪರಿಗಣಿಸುತ್ತಿಲ್ಲ. ಹೀಗಾಗಿ ಸಾವಿರಾರು ಸಂತ್ರಸ್ತರಿಗೆ ಮನೆ ನಿರ್ಮಿಸಲು ತೊಡಕಾಗುತ್ತಿದೆ.

ಸರ್ಕಾರಕ್ಕೆ ಮಾಹಿತಿ: ಸರ್ಕಾರಿ ನಿಯಮದ ಪ್ರಕಾರ ಯಾವ ಸ್ಥಳದಲ್ಲಿ ಮನೆ ಹಾನಿಯಾಗಿರುತ್ತದೆಯೋ ಅದೇ ಸ್ಥಳದಲ್ಲಿಯೇ ಮತ್ತೆ ಮನೆ ದುರಸ್ತಿ ಅಥವಾ ಮರು ನಿರ್ಮಾಣ ಮಾಡಿಕೊಳ್ಳಬೇಕು.

ಒಂದು ವೇಳೆ ಆ ಸ್ಥಳ ಬಿಟ್ಟು ಬೇರೆ ಕಡೆ ಮನೆ ಕಟ್ಟಲು ಮುಂದಾದರೆ ತಂತ್ರಾಂಶದಲ್ಲಿ ದಾಖಲಾಗುವುದಿಲ್ಲ. ಕೆಲ ಪ್ರಕರಣಗಳಲ್ಲಿ
ಅರ್ಹ ಸಂತ್ರಸ್ತರಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಕುಟುಂಬದಲ್ಲಿನ ತಕರಾರು ಕಾರಣಗಳಿಂದ ಪರಿಹಾರ ಬಿಡುಗಡೆ ಆಗಿಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ಪ್ರವಾಹದಿಂದ ಹಾನಿಯಾದ ಮನೆಗಳ ದುರಸ್ತಿ, ಮರು ನಿರ್ಮಾಣಕ್ಕೆ ಪರಿಹಾರ ನೀಡಲಾಗುತ್ತಿದೆ. ಕೆಲ ಪ್ರಕರಣಗಳಲ್ಲಿ ಅಕ್ರಮ-ಸಕ್ರಮ ಯೋಜನೆ ವ್ಯಾಪ್ತಿ ಬರುವ ಮನೆಗಳು ಹಾಗೂ ಮನೆ ಹಾನಿಯಾದ ಸ್ಥಳ ಬಿಟ್ಟು ಬೇರೆ ಸ್ಥಳಗಳಲ್ಲಿ ಮನೆ ನಿರ್ಮಾಣಕ್ಕೆ ತಂತ್ರಾಂಶದಲ್ಲಿ ಅಡ್ಡಿಯಾಗಿರುವುದು ನಿಜ. ಇಂತಹ ಪ್ರಕರಣಗಳನ್ನು ಮರು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ