ಮೂಡಿಗೆರೆ: ಮಳೆ ನಿಂತರೂ ಹನಿ ಜಾರಿದಂತೆ ಶನಿವಾರ ವರುಣ ಆರ್ಭಟ ನಿಲ್ಲಿಸಿದರೂ ಹಾನಿ ಗೋಚರವಾಗುತ್ತಿದೆ. ಕಾಫಿ ನಾಡಿನ ಮಲೆನಾಡು ಭಾಗಗಳಲ್ಲಿ ಮನೆ ಕುಸಿತ, ಕೃಷಿ ಭೂಮಿಗೆ ಹಾನಿ ಕಂಡುಬರುತ್ತಿದೆ. ಮತ್ತೆ ಮಳೆ ಆರ್ಭಟಿಸಿದರೆ ಭಾರಿ ಹಾನಿಯಾಗುವ ಆತಂಕ ಜನರಲ್ಲಿದೆ.
ತಾಲೂಕಿನಲ್ಲಿ ಆ.1ರಂದು ಆರಂಭಗೊಂಡ ಮಳೆಗೆ ಇಬ್ಬರು ಜೀವ ಕಳೆದುಕೊಂಡು, ಮನೆ, ಬೆಳೆಗಳು ಹಾನಿಯಾಗಿದ್ದು ಸಂತ್ರಸ್ತರು ಕಳೆದ ವರ್ಷದಂತೆ ಪರದಾಡುತ್ತಿದ್ದಾರೆ. ಮಳೆ ಕ್ಷೀಣಿಸಿದರೂ ಮಗ್ಗಲಮಕ್ಕಿ ಗ್ರಾಮದ ಹೂವಯ್ಯ ಅವರ ಮನೆ ಭಾನುವಾರ ಬೆಳಗ್ಗೆ ಕುಸಿದಿದೆ.
ಗಾಳಿ, ಮಳೆಗೆ ಸುಮಾರು 30 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದರೆ, 25 ಕ್ಕೂ ಅಧಿಕ ಮನೆಗಳು ಭಾಗಶಃ ಕುಸಿದಿವೆ. 385 ವಿದ್ಯುತ್ ಕಂಬ ಮುರಿದು ಬಿದ್ದಿವೆ. 200 ಹೆಕ್ಟೇರ್ ಕಾಫಿ ತೋಟ, ಭತ್ತದ ಗದ್ದೆ, ಶುಂಠಿ ಬೆಳೆ ನಾಶವಾಗಿದೆ. ಮನೆ ಕಳೆದುಕೊಂಡವರು ಬಾಡಿಗೆ ಮನೆ ಹುಡುಕುತ್ತಿದ್ದಾರೆ.
ಗೋಣಿಬೀಡಿನ ಅಗ್ರಹಾರದಲ್ಲಿ ದೇವಸ್ಥಾನಕ್ಕೆ ತೆರಳಿದ್ದ ರುದ್ರಮ್ಮ (87), ತರುವೆ ಗ್ರಾಮದ ರತ್ನಮ್ಮ (70) ಹೇಮಾವತಿ ನದಿ ಪ್ರವಾಹದಲ್ಲಿ ಕೊಚ್ಚಿಹೋಗಿ ಜೀವ ಕಳೆದುಕೊಂಡಿದ್ದಾರೆ.
ತಾಲೂಕಿನ 756 ಹಳ್ಳಿಗಳ ಪೈಕಿ 300ಕ್ಕೂ ಅಧಿಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು 5 ದಿನವಾದರೂ ಸಾಧ್ಯವಾಗಿಲ್ಲ. ಪಟ್ಟಣ, ಜನ್ನಾಪುರ, ಗೋಣಿಬೀಡು, ಬಿಳಗುಳ, ಹ್ಯಾಂಡ್ಪೋಸ್ಟ್, ಮಾಕೋನಹಳ್ಳಿ, ಕಿರುಗುಂದ ಭಾಗದಲ್ಲಿ 2000 ಮಿಮೀ ಮಳೆಯಾದರೆ, ಕೊಟ್ಟಿಗೆಹಾರ, ಬಣಕಲ್, ಕಳಸ, ಕುದುರೆಮುಖ, ಸಂಸೆ, ಬಾಳೂರು, ಊರುಬಗೆ, ಹಂತೂರು, ಬೈರಾಪುರ, ಭಾಗದಲ್ಲಿ ಇದರ ಎರಡುಪಟ್ಟು ಹೆಚ್ಚು ಮಳೆಯಾಗಿದೆ.
ಮೆಸ್ಕಾಂ ಸಿಬ್ಬಂದಿ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಪೂರೈಕೆ ಮಾಡಲು ಸಮಾರೋಪಾದಿಯಲ್ಲಿ ಕೆಲಸ ಮಾಡಿದರೂ ಪ್ರವಾಹದ ಸ್ಥಳದಲ್ಲಿ ಬಿದ್ದ ಕಂಬಗಳನ್ನು ಬದಲಾಯಿಸಲು ಸಾಧ್ಯವಾಗದೆ ಬಹುತೇಕ ಹಳ್ಳಿಗಳ ಜನ 5 ದಿನವಾದರೂ ಕತ್ತಲೆಯಲ್ಲೇ ಕಾಲ ಕಳೆಯಬೇಕಾಗಿದೆ. 8 ದಿನದ ಮಳೆ ಹಾನಿಗೇ ಜನ ಹೈರಾಣಾಗಿದ್ದಾರೆ. ಇನ್ನೂ ಮಳೆ ಮುಂದುವರಿದರೆ ಹಾನಿ ಪ್ರಮಾಣ ಊಹಿಸಲೂ ಅಸಾಧ್ಯ.