ಜಿಲ್ಲೆ

ಮನೆಯೊಳಗೊಂದು ಚಿತ್ರಲೋಕ ಹುಟ್ಟಿ…

ಹರ್ಷ ನ.ಪುರೋಹಿತ

ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
‘ಶ್ರಮ’ ದೊಳಗೆ ಚಿತ್ರ ಹುಟ್ಟಿ, ಆಲಯವೇ ಚಿತ್ರಲೋಕವಾಯಿತಯ್ಯ… ಈ ಚಿತ್ರ ಸಂತೆಯೊಳೊಂದು ಸುತ್ತು ಹಾಕಿದರೆ ನಿಮ್ಮ ಮೆದುಳಿಗೆ ಕಸರತ್ತು ಖಚಿತವಯ್ಯ…

ಚಿತ್ರವೆಂದರೆ ಹಾಗೆಯೇ… ಅವರವರ ಭಾವಕ್ಕೆ ತಕ್ಕಂತೆ ಅದು ಅನಾವರಣವಾಗುತ್ತ ಸಾಗುತ್ತದೆ. ಪ್ರತಿಯೊಬ್ಬರ ಕಣ್ಣುಗಳು ಅದನ್ನು ವಿಭಿನ್ನವಾಗಿ ನೋಡುತ್ತವೆ. ಅದರಂತೆ ಮನಸ್ಸು ಅದನ್ನು ಗ್ರಹಿಸುತ್ತ ಸಾಗುತ್ತದೆ.

ದುರ್ಗದ ಜನರೂ ಇಂಥದೊಂದು ಅನುಭೂತಿ ಪಡೆಯಬೇಕೆಂಬ ‘ಕ್ರಿಯೇಟಿವ್’ ಆಲೋಚನೆಯೊಂದಿಗೆ ಕಾರ್ಯಪ್ರವತ್ತರಾಗಿದ್ದಾರೆ ವೀರೇಶ್. ಸಾರ್ವಜನಿಕರ ಸ್ವಾಗತಕ್ಕೆ ‘ಕ್ರಿಯೇಟಿವ್ ಆರ್ಟ್ ಗ್ಯಾಲರಿ’ ಸಜ್ಜಾಗಿದೆ. ಇದರ ಹಿಂದೆ ಏಳೆಂಟು ತಿಂಗಳ ಶ್ರಮ ಅಡಗಿದೆ.

ಈ ಚಿತ್ರಕಲಾ ಜಗತ್ತಿನ ನಿರ್ಮಾಪಕ, ನಿರ್ದೇಶಕ, ಕಲಾವಿದ ಎಲ್ಲವೂ ಕ್ರಿಯೇಟಿವ್ ವೀರೇಶ್ ಅವರೇ. ಇಲ್ಲಿನ ಸುಂದರ ಚಿತ್ರಗಳು ನೋಡುಗರನ್ನು ಕಲ್ಪನೆಗೂ ಮೀರಿದ ಪ್ರಪಂಚಕ್ಕೆ ಕರೆದೊಯ್ಯಲಿವೆ.

ಚಿತ್ರಗಳ ಪ್ರಪಂಚ ಅನಾವರಣ
ಮನೆಯೊಳಗೆ ಪ್ರವೇಶಿಸುತ್ತಿದ್ದಂತೆಯೇ ಚಿತ್ರಗಳ ಪ್ರಪಂಚ ಅನಾವರಣವಾಗುತ್ತದೆ. ಮೇಲ್ನೋಟಕ್ಕೆ ಯಾವ ಚಿತ್ರವೆಂದು ತಿಳಿಯುವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ನಭೋಮಂಡಲದ ವಿಸ್ಮಯಕಾರಿ ಜಗತ್ತು ತೆರೆದುಕೊಳ್ಳುತ್ತದೆ…!

ಮಾನವನ ಪ್ರತಿರೂಪ ಎನಿಸುವ ಚಿತ್ರವೊಂದು ಕೆಲ ಸೆಕೆಂಡುಗಳಲ್ಲಿ ಅದು ಮತ್ತೇನೋ ಇರಬೇಕು ಎಂಬ ಭಾವನೆ ಮೂಡಿಸುತ್ತದೆ. ಅನೇಕ ಚಿತ್ರಗಳು ಕ್ಷಣ ಕ್ಷಣಕ್ಕೂ ಭಿನ್ನ-ವಿಭಿನ್ನ ಅಭಿಪ್ರಾಯ ಮೂಡಿಸಿ, ನಮಗೂ ಜೀವಂತಿಕೆ ಇದೆ ಎಂದು ಸಾರುತ್ತವೆ.

ಐತಿಹಾಸಿಕ ಕಲ್ಲಿನಕೋಟೆ, ಬೇಲೂರು-ಹಳೇಬೀಡು ಕಲಾಕೃತಿಗಳ ಮಾದರಿ, ಗ್ರಾಮೀಣ ಸೊಗಡು, ಸ್ತ್ರೀ-ಜಗತ್ತು, ರಾಷ್ಟ್ರಕವಿ ಕುವೆಂಪು ಒಳಗೊಂಡು ಅನೇಕ ಖ್ಯಾತ ಸಾಹಿತಿಗಳು, ಪ್ರಾಣಿ ಪ್ರಪಂಚ ಇಲ್ಲಿ ಮೈದಾಳಿವೆ.

ಪ್ರಕೃತಿಯಲ್ಲಿ ನಡೆಯುವ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ಸತತ ಎಂಟು ವರ್ಷಗಳಿಂದ ಬಿಡಿಸಿರುವ ಹಲವು ಚಿತ್ರಗಳು ಗ್ಯಾಲರಿಯನ್ನು ಅಲಂಕರಿಸಿವೆ.

ಯಶೋಧರ ಚರಿತೆ, ಅಲ್ಲಮರ ವಚನಗಳೇ ಚಿತ್ರವಾಗಿ ಬಣ್ಣದಲ್ಲಿ ಅರಳಿರುವುದು ವಿಶೇಷ. ಓದುವ ಹವ್ಯಾಸವಿದ್ದರೆ, ಯಾವುದೇ ಕ್ಷೇತ್ರದಲ್ಲಾಗಲಿ ಸ್ವಂತಿಕೆಯಿಂದ ಹೊಸತನ್ನು ಸೃಷ್ಟಿಸಬಹುದು ಎಂಬುದನ್ನು ಈ ಗ್ಯಾಲರಿ ಸಾರುತ್ತಿದೆ. ಕೆಲವು ಚಿತ್ರ ಪೆನ್ಸಿಲ್‌ನಿಂದ ಮೂಡಿ ಬಂದರೆ, ಮತ್ತೆ ಕೆಲವಕ್ಕೆ ಆಧುನಿಕ ಉಪಕರಣ ಬಳಸಲಾಗಿದೆ.

ಬಾಕ್ಸ್ ಆಳವಾದ ಯೋಚನೆಗಳೇ ಕಲೆಯ ಮೂಲ
ಭೂಕಂಪ, ಜ್ವಾಲಾಮುಖಿ, ಸಮುದ್ರದ ಅಲೆ, ಭೂಮಂಡಲ, ಸರೋವರ, ಧಾತುಗಳು, ಜೀವ ಜಗತ್ತಿನ ಸೃಷ್ಟಿ ಹೇಗೆ, ಮಾನವನ ಹೃದಯ ಒಳಗೊಂಡು ನಿರ್ದಿಷ್ಟವಾಗಿ ಇದೇ ಚಿತ್ರ ಬಿಡಿಸಬೇಕೆಂದು ಯಾವುದೇ ಯೋಜನೆ ಹಾಕಿಕೊಳ್ಳದೆ, ಕೃತಕ ಬುದ್ಧಿಮತ್ತೆಗೆ ವಿರುದ್ಧವಾಗಿ ಮನಸ್ಸಿನ ಆಳ, ಅಂತರಾಳಕ್ಕೆ ಹೋಗಿ ರಚಿಸಿರುವ ಕಾರಣ ಚಿತ್ರಗಳು ಕಲೆಯ ರೂಪದಲ್ಲಿ ಮೂಡಿಬಂದಿವೆ. ಇದರಲ್ಲಿ ಕೆಲವು ಅಂತಾರಾಷ್ಟ್ರೀಯ ಮಟ್ಟಕ್ಕೂ ಆಯ್ಕೆಯಾಗಿವೆ.

ಕಲಾವಿದನಿಗೆ ರಸಗ್ರಹಣ ಆಗಬೇಕು. ಅದಕ್ಕಾಗಿ ಓದುವ ಹವ್ಯಾಸವಿರಬೇಕು. ಪ್ರಕೃತಿಯೊಂದಿಗೆ ಜೀವಸಂಬಂಧಿ ಒಡನಾಟ, ಪ್ರೀತಿ ಹೆಚ್ಚಾದಾಗ ಅದ್ಭುತ ಕಲಾಕೃತಿ ಹೊರಹೊಮ್ಮುತ್ತದೆ. ನನ್ನೊಳಗೆ ಆಸೆ, ತುಡಿತ ಹೆಚ್ಚಾದ ಕಾರಣ ಇಂತಹ ಚಿತ್ರಗಳನ್ನು ಬಿಡಿಸಲು ಸಾಧ್ಯವಾಗಿದೆ. ಸಾಂಪ್ರದಾಯಿಕ ಉಪಕರಣ ಬಳಸದೆಯೇ ಚಿತ್ರಿಸಲಾಗಿದೆ.ಕ್ರಿಯೇಟಿವ್ ವೀರೇಶ್, ಕಲಾವಿದ