ಸಂಡೂರು: ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ನರಸಿಂಗಾಪುರ ಗ್ರಾಪಂ ಕಚೇರಿ ಮುಂದೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ರಣಜೀತ್‌ಪುರ, ನರಸಿಂಗಾಪುರ, ಆಕಾಶನಗರ ಕ್ಯಾಂಪ್‌ಗಳ ನಿವಾಸಿಗಳು ಗುರುವಾರ ಧರಣಿ ನಡೆಸಿದರು.
ನೂರಾರು ಬಡ ಕೂಲಿ ಕಾರ್ಮಿಕರು ಬಾಡಿಗೆ ಮನೆ ಮತ್ತು ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ನಿವೇಶನ ಸಹಿತ ವಸತಿ ಸೌಲಭ್ಯ ಕಲ್ಪಿಸುವಂತೆ ಗ್ರಾಪಂ ಮತ್ತು ತಾಪಂಗಳಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ನರಸಿಂಗಾಪುರ, ಎನ್‌ಎಂಡಿಸಿ ಟೌನ್‌ಶಿಪ್‌ಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದು, ಮನೆ ಬಾಡಿಗೆ ಕಟ್ಟಲಾಗದೆ ಸಂಕಷ್ಟ ಅನುಭವಿಸುತ್ತಿದ್ದೇವೆ. ಈ ಹಿಂದೆ ಸರ್ಕಾರದ ಆದೇಶದ ಮೇರೆಗೆ 94ಸಿಯಡಿ ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಕ್ರಮ ಜರುಗಿಸಿಲ್ಲ. ಆದ್ದರಿಂದ ಕೂಡಲೇ ನಿವೇಶನ ಒದಗಿಸುವ ಜತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು. ಬಳಿಕ ಗ್ರಾಪಂ ಪಿಡಿಒ ಕೆ.ಪೂರ್ಣತೇಜಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಕ್ಕಮಹಾದೇವಿ, ಕೋಗಳಿ ಮಲ್ಲೇಶ್, ಕೆ.ಶಂಕ್ರಮ್ಮ, ಕೆ.ನೀಲಾ, ಗಂಗಮ್ಮ, ಉಮಾ, ಲಕ್ಷ್ಮಿ, ಶಾರದಮ್ಮ, ಅಕ್ಕಮ್ಮ, ಬಿ.ರೇಣಿಕಾ, ಭಾರತಿ, ರೂಪಾ, ಕುಮಾರಸ್ವಾಮಿ ಇತರರಿದ್ದರು.